ADVERTISEMENT

ದಡ್ಡಿ: ಸೊರಗಿದ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 6:55 IST
Last Updated 13 ಫೆಬ್ರುವರಿ 2011, 6:55 IST

ಯಮಕನಮರಡಿ: ಸಮೀಪದ ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಮಹಿಳಾ ವೈದ್ಯರು ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ.
ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದೆ ಮಹಿಳಾ ವೈದ್ಯರು ಇದ್ದರು. ಆದರೆ ಅವರು ಸುಮಾರು ಒಂದು ವರ್ಷ ಹಿಂದೆ ನಿಯೋಜನೆ ಮಾಡಿಸಿಕೊಂಡು ಹೋಗಿದ್ದಾರೆ. ಅಂದಿನಿಂದ ಇಂದಿನವರಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ವೈದ್ಯರಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.

ಆಸ್ಪತ್ರೆಗೆ ವೈದ್ಯಕೀಯ ಪ್ರಮಾಣ ಪತ್ರಗಳಿಗಾಗಿ ಬರುವ ರೋಗಿಗಳ ಪಾಡು ಇನ್ನೂ ಕಷ್ಟ. ಕೇಂದ್ರದಲ್ಲಿ  ಒಬ್ಬ ವೈದ್ಯ (ಡಾ.ಎಂ.ಎಸ್. ಕವಟಗಿಮಠ) ಇದ್ದರೂ ಕಚೇರಿ ಕೆಲಸಗಳಿಗಾಗಿ ಹೊರ ಹೋಗುವ ಕಾರಣ ರೋಗಿಗಳಿಗೆ ತೊಂದರೆ ಆಗಿದೆ.

ಅಪಘಾತ, ಆತ್ಮಹತ್ಯೆ ಪ್ರಕರಣಗಳ ಚಿಕಿತ್ಸೆ ನೀಡಲು ಹೋಬಳಿ ಮಟ್ಟದ ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವಾದರೆ ಸುಮಾರು 45 ಕಿ.ಮೀ. ದೂರದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಅವಲಂಬಿಸಬೇಕಾಗಿದೆ.

ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುಡನಹಟ್ಟಿ, ದಡ್ಡಿ-ರಾಮೇವಾಡಿ, ಮಾನಗಾಂವ, ಮಜತಿ, ನಾಗನೂರ.ಕೆ.ಡಿ, ಕೆ.ಎಂ, ಮಣಗುತ್ತಿ ಹೀಗೆ ಸುಮಾರು 13 ಗ್ರಾಮಗಳು ಬರುತ್ತವೆ.

ಈ ಎಲ್ಲ ಗ್ರಾಮದ ಜನರು ಕೇಂದ್ರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ದಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯರು ತುಂಬಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಇನ್ನಾದರೂ ಎಚ್ಚೆತ್ತು ತಕ್ಷಣ ಮಹಿಳಾ ವೈದ್ಯರನ್ನು ನೇಮಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ದಡ್ಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.