ಬೆಳಗಾವಿ: ತಾಂತ್ರಿಕ ಶಿಕ್ಷಣಕ್ಕೆ ಹೊಸ ಆಯಾಮವನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ‘ವಿಟಿಯು ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿ’ಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ಥಾಪಿಸಲು ನಿರ್ಧರಿಸಿದ್ದು, ಮಾರ್ಚ್ 4ರಂದು ಸಂಜೆ 6 ಗಂಟೆಗೆ ಇದರ ಶಂಕುಸ್ಥಾಪನೆ ಸಮಾರಂಭ ನಗರಸಭೆ ಮೈದಾನದಲ್ಲಿ ನಡೆಯಲಿದೆ.
ಉನ್ನತ ಶಿಕ್ಷಣ ಹಾಗೂ ಪ್ರವಾ ಸೋಧ್ಯಮ ಸಚಿವ ಆರ್.ವಿ. ದೇಶಪಾಂಡೆ ಶಂಕುಸ್ಥಾಪನೆ ನೆರವೇರಿ ಸಲಿದ್ದಾರೆ. ಕುಲಪತಿ ಡಾ. ಎಚ್. ಮಹೇಶಪ್ಪ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಆರ್. ಶಿವಕುಮಾರ್ ಹಾಗೂ ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್. ಚಂಡಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಾಂಡೇಲಿ ನಗರಸಭಾ ಅಧ್ಯಕ್ಷೆ ದೀಪಾ ಮಾರಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಹಿತಿ ತಂತ್ರಜ್ಞಾನ, ಇಂಧನ ಮತ್ತು ಮೂಲಸೌಕರ್ಯ ಮುಂತಾದ 20 ಕ್ಷೇತ್ರಗಳಲ್ಲಿನ ಉದ್ಯಮಿಗಳು ನಡೆಸಿದ ಸಮೀಕ್ಷೆ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಪದವಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದ್ದರೂ, ಉದ್ಯಮಿಗಳು ನಿರೀಕ್ಷಿಸುವ ವೃತ್ತಿ ಕೌಶಲ ಅವರಲ್ಲಿ ಇಲ್ಲದಿರುವುದು ಕಂಡು ಬಂದಿದೆ.
ಭಾರತದ ಭವಿಷ್ಯವನ್ನು ಮುನ್ನಡೆಸುವ ಯುವ ವಿದ್ಯಾರ್ಥಿಗಳಲ್ಲಿ ಉದ್ಯೋಗದಾತರು ಬಯಸುವ ಸಂವಹನ ಕೌಶಲ, ತಾಂತ್ರಿಕ ಕೌಶಲ, ವಸ್ತುನಿಷ್ಠ ಆಲೋಚನೆ, ಸಮಸ್ಯೆ ನಿರ್ವಹಣೆ ಮುಂತಾದ ಕೌಶಲಗಳನ್ನು ಬೆಳೆಸಬೇಕಾಗಿದೆ.
ಉದ್ಯೋಗದಾತರು ಹಾಗೂ ಉದ್ಯೋಗ ಆಕಾಂಕ್ಷಿಗಳ ನಡುವಿನ ಅಂತರವನ್ನು ನೀಗಿಸುವ ನಿಟ್ಟಿನಲ್ಲಿ ಈ ಕೌಶಲ್ಯಾಭಿವೃದ್ಧಿ ಅಕಾ ಡೆಮಿ ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಡಾ. ಮಹೇಶಪ್ಪ ತಿಳಿಸಿದ್ದಾರೆ.
‘ಯುವ ಶಕ್ತಿಯ ತಾಂತ್ರಿಕ ಕೌಶಲಗಳನ್ನು ಬೆಳೆಸಲು ರಾಜ್ಯದಲ್ಲಿ ಮೊದಲ ಬಾರಿಗೆ ವಿಟಿಯು ವತಿಯಿಂದ ಇಂಥ ಅಕಾಡೆಮಿ ಸ್ಥಾಪಿಸಲಾಗುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಗಮನದ ಲ್ಲಿಟ್ಟುಕೊಂಡು, ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಈ ಅಕಾಡೆಮಿ ವತಿಯಿಂದ ಪ್ರಾರಂಭಿಕ ಹಾಗೂ ಮುಂದುವರಿದ ಹೀಗೆ ಎರಡು ಹಂತಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಇ– -ಆಡಳಿತ ತರಬೇತಿ, ಕಾರ್ಪೊರೇಟ್ ಉದ್ಯೋಗಿಗಳಿಗೆ ಹಾಗೂ ಸರ್ಕಾರಿ ನೌಕರರಿಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.
ಇದು ಕೃಷಿ ಸಂಶೋಧನಾ ಕೇಂದ್ರವಾಗಿ, ಕೈಗಾರಿಕೆಗಳಿಗೆ ಸಲಹಾ ಕೇಂದ್ರವಾಗಿ ಹಾಗೂ ತರಬೇತುದಾರರಿಗೆ ತರಬೇತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿದೆ.
ದಾಂಡೇಲಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಅಕಾಡೆಮಿ, ತಂತ್ರಜ್ಞರಿಗೆ ಸಂಶೋಧನೆ ಕೈಗೊಳ್ಳಲು ಉತ್ತಮ ವಾತಾವರಣ ಒದಗಿಸಲಿದೆ.
ಮೊದಲ ಹಂತದಲ್ಲಿ ಶೈಕ್ಷಣಿಕ ವಿಭಾಗ, ಕೌಶಲ ತರಬೇತಿ ಪ್ರಯೋಗಾಲಯಗಳು, ಉಪನ್ಯಾಸ ಮಂದಿರಗಳು, ವಿದ್ಯಾರ್ಥಿ– ವಿದ್ಯಾರ್ಥಿನಿಯರ ವಸತಿ ಗೃಹಗಳು, ಸಭಾಂಗಣ ಮುಂತಾದ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.