ADVERTISEMENT

ದೀಪಾವಳಿ ಪಟಾಕಿ ‘ಠುಸ್‌’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 5:09 IST
Last Updated 30 ಅಕ್ಟೋಬರ್ 2017, 5:09 IST
ಬೆಳಗಾವಿಯಲ್ಲಿ ದೀಪಾವಳಿ ವೇಳೆ ಪಟಾಕಿ ಮಾರಾಟ ಇಳಿಮುಖವಾಗಿತ್ತು
ಬೆಳಗಾವಿಯಲ್ಲಿ ದೀಪಾವಳಿ ವೇಳೆ ಪಟಾಕಿ ಮಾರಾಟ ಇಳಿಮುಖವಾಗಿತ್ತು   

ಬೆಳಗಾವಿ: ಪಟಾಕಿಯ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಮೂಡಿರುವ ಜಾಗೃತಿಯ ಪರಿಣಾಮವಾಗಿ ಈ ಸಲದ ದೀಪಾವಳಿಯಲ್ಲಿ ಪಟಾಕಿ ಸದ್ದು ಜೋರಾಗಿ ಕೇಳಿಬರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಪಟಾಕಿಗಳು ಸಿಡಿದಿವೆ. ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ತಗ್ಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಅಂಶಗಳು ಹೇಳಿವೆ.

ಇಲ್ಲಿನ ರಾಮತೀರ್ಥ ನಗರದಲ್ಲಿ ದೀಪಾವಳಿ ಸಂಭ್ರಮದ ನಾಲ್ಕು ದಿನಗಳ ಕಾಲ ಮಂಡಳಿಯು ಪರೀಕ್ಷೆಗಳನ್ನು ಕೈಗೊಂಡಿತ್ತು. ಇದೇ ತಿಂಗಳ 17ರಿಂದ ನಾಲ್ಕು ದಿನಗಳ ಕಾಲ ಸಂಜೆ 6ರಿಂದ ರಾತ್ರಿ 11 ಗಂಟೆಯವರೆಗೆ ಅಧ್ಯಯನ ನಡೆಸಿತ್ತು. ಈ ಅಂಶಗಳನ್ನು ಕ್ರೋಢೀಕರಿಸಿ, ಬೆಂಗಳೂರಿನಲ್ಲಿರುವ ಮಂಡಳಿಯ ಮುಖ್ಯ ಕಚೇರಿಗೆ ಅಧಿಕಾರಿಗಳು ಕಳುಹಿಸಿ ಕೊಟ್ಟಿದ್ದಾರೆ.

ತಗ್ಗಿದ ದೂಳಿನ ಕಣಗಳು: ವಾಯು ಮಾಲಿನ್ಯಕ್ಕೆ ಕಾರಣವಾಗುವ ದೂಳಿನ ಕಣಗಳು ಹಾಗೂ ಅವುಗಳ ಅಳತೆಯ ಆಧಾರದ ಮೇಲೆ 10 ಮೈಕ್ರೊಗ್ರಾಂ/ ಮೀಟರ್‌ ಕ್ಯೂಬ್‌ ಹಾಗೂ 2.5 ಮೈಕ್ರೊಗ್ರಾಂ/ ಮೀಟರ್‌ ಕ್ಯೂಬ್‌ ಎನ್ನುವ ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿರುತ್ತದೆ. 10 ಮೈಕ್ರೊಗ್ರಾಂಗಿಂತ ಹೆಚ್ಚಿನ ತೂಕದ ಕಣಗಳು ಭಾರದಿಂದಾಗಿ ವಾತಾವರಣದಲ್ಲಿ ತೇಲಿ ಹೋಗುವುದಿಲ್ಲ. ಊಸಿರಾಟದ ಮೂಲಕ ಸಲೀಸಾಗಿ ದೇಹದೊಳಗೆ ನುಸುಳುವುದಿಲ್ಲ. ಇವುಗಳನ್ನು ಸುಲಭವಾಗಿ ಗುರುತಿಸಿ, ತಡೆಗಟ್ಟಬಹುದಾಗಿದೆ. ಇವುಗಳ ಪ್ರಮಾಣವು ಮೊದಲ ದಿನ 54, ಎರಡನೇ ದಿನ 54, ಮೂರನೇ ದಿನ 71 ಹಾಗೂ ನಾಲ್ಕನೇ ದಿನ 83 ಅಂಶಗಳವರೆಗೆ ತಲುಪಿತ್ತು. ಸ್ಟ್ಯಾಂಡರ್ಡ್‌ ಪ್ರಮಾಣವು ಗರಿಷ್ಠ 100 ಮೈಕ್ರೊಗ್ರಾಂ/ ಮೀಟರ್‌ ಇದ್ದು, ನಾಲ್ಕು ದಿನಗಳ ಕಾಲ ಗರಿಷ್ಠ ಪ್ರಮಾಣದೊಳಗೆ ಇದೆ.

ADVERTISEMENT

2.5 ಮೈಕ್ರೊಗ್ರಾಂಗಿಂತ ಕಡಿಮೆ ತೂಕದ ದೂಳಿನ ಕಣಗಳು ಗಾಳಿಯಲ್ಲಿ ತೇಲುತ್ತವೆ. ಮನುಷ್ಯರ ದೇಹದೊಳಗೆ ಉಸಿರಾಟದ ಮೂಲಕ ಸೇರಿಕೊಳ್ಳುತ್ತವೆ. ಇದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು (ಅಸ್ತಮಾ, ಇತ್ಯಾದಿ) ಬರುತ್ತವೆ. ಇವು ಹೆಚ್ಚಿನ ಅಪಾಯಕಾರಿಯಾಗಿರುತ್ತವೆ. ಪರೀಕ್ಷೆ ಕೈಗೊಂಡ ಮೊದಲ ದಿನ 46, ಎರಡನೇ ದಿನ 43, ಮೂರನೇ ದಿನ 44 ಹಾಗೂ ನಾಲ್ಕನೇ ದಿನ 56 ಅಂಶಗಳವರೆಗೆ ತಲುಪಿತ್ತು. ಇವೆಲ್ಲ ಪ್ರಮಾಣವು ಸ್ಟ್ಯಾಂಡರ್ಡ್‌ ಪ್ರಮಾಣಕ್ಕಿಂತ (80) ಕಡಿಮೆ ಇರುವುದು ಪತ್ತೆಯಾಗಿದೆ.

ತಗ್ಗಿದ ಅನಿಲ ಪ್ರಮಾಣ: ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯಕ್ಕೆ ಕಾರಣವಾಗುವ ಸಲ್ಫರ್‌ ಡೈಆಕ್ಸೈಡ್‌ (ಎಸ್‌ಒಟು) ಹಾಗೂ ನೈಟ್ರೋಜನ್‌ ಡೈಆಕ್ಸೈಡ್‌ (ಎನ್‌ಒಟು) ಪ್ರಮಾಣವು ಕಡಿಮೆ ಇದೆ. ನಾಲ್ಕು ದಿನಗಳ ವೇಳೆ ಸರಾಸರಿಯಾಗಿ ಎಸ್‌ಒಟು– 2.66 ಇದೆ. ಇದೇ ರೀತಿ ಎನ್‌ಒಟು ಕೂಡ 16.62 ಅಂಶ ತಲುಪಿದೆ. ಇವೆರಡೂ ರಾಸಾಯನಿಕ ಪದಾರ್ಥಗಳ ಗರಿಷ್ಠ ಪ್ರಮಾಣವು 80ರಷ್ಟಿದ್ದು, ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪರಿಸರದಲ್ಲಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಬ್ದ ಮಾಲಿನ್ಯವೂ ನಿಯಂತ್ರಣದಲ್ಲಿ: ಹಬ್ಬದ ಸಂಭ್ರಮದ ವೇಳೆ ಶಬ್ದ ಮಾಲಿನ್ಯ ಕೂಡ ನಿಯಂತ್ರಣದಲ್ಲಿತ್ತು. ಕ್ರಮವಾಗಿ ನಾಲ್ಕು ದಿನಗಳ ಕಾಲ 59.96, 64.34, 65.31 ಹಾಗೂ 62.27 ಡೆಸಿಬಲ್‌ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ದಾಖಲಾಗಿದೆ. ಗರಿಷ್ಠ ಪ್ರಮಾಣದ ಮಿತಿಯೊಳಗೆ ಇದೆ. ವಾಣಿಜ್ಯ ಪ್ರದೇಶದಲ್ಲಿ 65– 55 ಡೆಸಿಬಲ್‌ ನಿಗದಿಪಡಿಸಲಾಗಿದೆ.

‘ಪಟಾಕಿ ಸಿಡಿಸಬಾರದು. ಇದು ಆರೋಗ್ಯ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ ಎನ್ನುವ ಜಾಗೃತಿ ಈಗ ಎಲ್ಲೆಡೆ ಮೂಡುತ್ತಿದೆ. ಇದರ ಫಲವಾಗಿ ಇತ್ತೀಚೆಗೆ ಹಬ್ಬದ ದಿನಗಳಲ್ಲಿ ಪಟಾಕಿ ಸಿಡಿಸುವುದು ಕಡಿಮೆಯಾಗಿದೆ. ಈ ಭಾಗದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಹೋಲಿಸಿದರೆ ದೀಪಾವಳಿಯಲ್ಲಿ ಕಡಿಮೆ ಪಟಾಕಿ ಸಿಡಿಸಲಾಗುತ್ತದೆ‘ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಜಿ.ಎಂ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರಿ ಶಬ್ದ ಮಾಡುವ (125 ಡೆಸಿಬಲ್‌ಗಿಂತ ಹೆಚ್ಚು) ಪಟಾಕಿಗಳನ್ನು ಮಾರಾಟ ಮಾಡದಂತೆ ಎಲ್ಲ ಪಟಾಕಿ ಅಂಗಡಿಗಳಿಗೆ ಎಚ್ಚರಿಕೆ ನೀಡಿದ್ದೇವು. ಮೇಲಿಂದ ಮೇಲೆ ಹೋಗಿ ಮಾರುಕಟ್ಟೆಯಲ್ಲಿ ತಪಾಸಣೆ ನಡೆಸುತ್ತಿದ್ದೇವು. ಇವೆಲ್ಲ ಕ್ರಮಗಳಿಂದಲೂ ಪರಿಸರ ಮಾಲಿನ್ಯ ನಿಯಂತ್ರಿಸಿದ್ದೇವೆ ಎಂದು ಪರಿಸರ ಅಧಿಕಾರಿ ಗೋಪಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.