ADVERTISEMENT

ದುಃಸ್ಥಿತಿಯಲ್ಲಿ ಹಿಂಡಲಗಾ ಬಡಾವಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:50 IST
Last Updated 12 ಫೆಬ್ರುವರಿ 2011, 8:50 IST

ಬೆಳಗಾವಿ: ಕುಡಿಯಲು ನೀರಿಲ್ಲ..., ಅಲ್ಲಲ್ಲಿ ರಸ್ತೆ ಕುಸಿದು ಹೋಗಿದೆ..., ಬೀದಿ ದೀಪ ಇಲ್ಲವೇ ಇಲ್ಲ...!ಇದು ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಕಾಲನಿಯ ಸ್ಥಿತಿ.

ಕಾಲನಿಯಲ್ಲಿ ಬಹಳಷ್ಟು ಸಮಸ್ಯೆಗಳಿಗೆ. ಸಂಬಂಧಿಸಿದವರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾರೂ ಸಮಸ್ಯೆ ಪರಿಹರಿಸಿಲ್ಲ ಎಂದು ದೂರುತ್ತಾರೆ ಅಲ್ಲಿಯ ನಿವಾಸಿಗಳು.

ಕಾಲನಿಯ ರಸ್ತೆಗಳು ಹಾಳಾಗಿವೆ. ಕಳಪೆ ಗುಣಮಟ್ಟದ ಕಾಮಗಾರಿ ನಿರ್ಮಾಣದಿಂದಾಗಿ ಚರಂಡಿಗಳು ಕಿತ್ತು ಹೊಗಿವೆ. ಒಂದೆಡೆ ಅರ್ಧದಷ್ಟು ರಸ್ತೆ ಕುಸಿದು ಬಿದ್ದು, ಸಂಚರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

ಕಾಲನಿಯ ಅರ್ಧದಷ್ಟು ಮನೆಗಳಿಗೆ ಮಾತ್ರ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ. ಉಳಿದ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಉಳಿದ ಮನೆಗಳಿಗೂ ಸರಿಯಾಗಿ ನೀರು ಪೂರೈಕೆಯಾಗುವುದಿಲ್ಲ.

ಬೀದಿ ದೀಪಗಳ ನಿರ್ವಹಣೆಯ ಕೊರತೆಯಿಂದಾಗಿ ಬಹಳಷ್ಟು ದೀಪಗಳು ಹೊತ್ತಿಕೊಳ್ಳುವುದೇ ಇಲ್ಲ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಕಗ್ಗತ್ತಲು ಆವರಿಸಿ ಬಿಡುತ್ತದೆ. ಕತ್ತಿಲನಲ್ಲಿಯೇ ಕುಸಿದು ಹೋಗಿರುವ ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿ ಅಲ್ಲಿಯ ನಿವಾಸಿಗಳದ್ದಾಗಿದೆ.

ಮೂಲಸೌಕರ್ಯ ಒದಗಿಸುವಂತೆ ಗೃಹ ಮಂಡಳಿಯ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜವಾಗಿಲ್ಲ ಎಂದು ಸುಭಾಷ ಪಾಟೀಲ, ಬಿ.ಎಂ. ಗವಿ, ರಮೇಶ ಜೋಶಿ, ಗೌತಮ್, ವಿನೋದ ದೊಡ್ಡಣ್ಣವರ ಮತ್ತಿತರರು ದೂರಿದ್ದಾರೆ. ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮುಂದೆ ಧರಣಿ ಕೂಡುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.