ADVERTISEMENT

ಧರೆಗುರುಳಿದ ಮರ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 9:18 IST
Last Updated 6 ಜೂನ್ 2013, 9:18 IST

ಬೆಳಗಾವಿ: ಜಿಲ್ಲೆಯ ಹಲವೆಡೆ ಭಾರಿ ಗಾಳಿ ಮಳೆಗೆ ಮಹಿಳೆಯೊಬ್ಬಳು, ಮೃತಪಟ್ಟಿದ್ದು, ವಿದ್ಯುತ್ ಕಂಬ, ಮರಗಳು ನೆಲಕ್ಕುರುಳಿವೆ. ಹಳ್ಳಗಳು ತುಂಬಿ ಹರಿದು ಸಂಚಾರಕ್ಕೆ ಅಡಚಣೆಯಾಗಿದೆ.

ಅಥಣಿ ವರದಿ: ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮರವೊಂದು ನೆಲಕ್ಕುರುಳಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ಮಹಿಳೆಯನ್ನು ವಿಮಲಾ ವಸಂತ ಬಾಗಡಿ (45) ಎಂದು ಗುರುತಿಸಲಾಗಿದೆ. ಹೊಲದಿಂದ ಮನೆಗೆ ಮರಳುತ್ತಿದ್ದ ವೇಳೆ ಉಗಾರ ಶುಗರ್ಸ್‌ನ ಪಂಪ್ ಹೌಸ್ ರಸ್ತೆಯಲ್ಲಿರುವ ಮರ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲಿಯೇ ಅಸು ನೀಗಿದಳೆಂದು ತಿಳಿದು ಬಂದಿದೆ. ಬಿರುಗಾಳಿಯ ರಭಸಕ್ಕೆ ಅಶೋಕ ಪುಟಾಣಿ ಎಂಬುವವರ ಮನೆಯ ಮೇಲೆ ಬೃಹತ್ ಗಾತ್ರದ ಆಲದ ಮರವೊಂದು ಅಪ್ಪಳಿಸಿರುವ ಪರಿಣಾಮ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

ಸರ್ಕಾರಿ ಕನ್ನಡ ಶಾಲೆಯ ಶೀಟುಗಳು ಹಾರಿ ಹೋಗಿವೆ. ಇದಲ್ಲದೇ ಇನ್ನೂ ಆರೇಳು ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರ ಪರಿಣಾಮ ಗ್ರಾಮದಲ್ಲಿ ಸದ್ಯ ಸಂಪೂರ್ಣ ಕಗ್ಗತ್ತಲು ಆವರಿಸಿದ್ದು, ಬಿರುಗಾಳಿ ಮಳೆ ಮುಂದುವರಿದಿದೆ.

ಸಂಚಾರಕ್ಕೆ ಅಡ್ಡಿ
ರಾಯಬಾಗ ವರದಿ: ಭಾರಿ ಬಿರುಗಾಳಿ ಹಾಗೂ ಮಳೆಯಿಂದಾಗಿ ತಾಲ್ಲೂಕಿನ ಕುಡಚಿ ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ  ಸಂಜೆ 6ಗಂಟೆ ಸುಮಾರಿಗೆ  ಮರಗಳು ವಿದ್ಯುತ್ ಕಂಬಗಳ ಮೆಲೆ ಬಿದ್ದ ಪರಿಣಾಮ ಕುಡಚಿ ಪಟ್ಟಣದಲ್ಲಿ  ಸುಮಾರು 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ರಾಯಬಾಗ -ಕುಡಚಿ ರಸ್ತೆಯ ಮೇಲೆ ಕುಡಚಿ ಸರ್ಕಾರಿ ಆಸ್ಪತ್ರೆಯಿಂದ ಜಮಖಂಡಿ ರಸ್ತೆ ಸರ್ಕಲ್ ವರೆಗೆ ಮರ ಉರುಳಿ ಬಿದ್ದಿದ್ದರಿಂದ ಒಂದರ ಮೇಲೊಂದು ಕಂಬಗಳು ಮುರಿದು ರಸ್ತೆ ಮೇಲೆ ಬಿದ್ದಿವೆ. ಅದೇ ರೀತಿ ಕುಡಚಿ ಪಟ್ಟಣದಲ್ಲಿ  ಸಹ ತಂತಿ ಹರಿದು 10ರಿಂದ 12 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಆದರೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಹೆಸ್ಕಾಂ ಕುಡಚಿ ಶಾಖಾಧಿ ಕಾರಿ ಎಸ್.ಎನ್.ಸಾವಳಗಿ ತಿಳಿಸಿದ್ದಾರೆ.
ಮಳೆಗಿಂತ ಬಿರುಗಾಳಿ ಜಾಸ್ತಿ ಇದ್ದು ಈಗಾಗಲೇ ರಸ್ತೆ ಮೇಲೆ ಮುರಿದು ಬಿದ್ದ ಕಂಬಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಅವರು ತಾಲ್ಲೂಕಿನ ಗುಂಡವಾಡ ಪೀಡರ್ ಮೇಲಿನ ಎಲ್. ಟಿ. ಲೈನ್‌ದ ಎಲ್ಲ ಕಂಬಗಳೂ ಸಹ ಮುರಿದು ಬಿದ್ದಿವೆ ಎಂದು ತಿಳಿಸಿದ್ದಾರೆ. ಅಂದಾಜ ಹಾನಿ ಮಾಡಲಾಗುವದು ಎಂದು ಹೇಳಿದ್ದಾರೆ.  

ಜಮಖಂಡಿ-ಮಿರಜ್ ರಸ್ತೆ ಮೇಲೆ ಕುಡಚಿಯಿಂದ ಸುಟ್ಟಟ್ಟಿ ಕ್ರಾಸ್ ಕಡೆಗೆ 3 ಕಿ.ಮೀ. ಅಂತರದಲ್ಲಿ  ಸಂಜೆ 6 ಗಂಟೆ ಸುಮಾರಿಗೆ ಬಿರುಗಾಳಿಗೆ ರಸ್ತೆ ಮೇಲೆ  ಮರ ಉರುಳಿದ ಪರಿಣಾಮ ಸ್ವಲ್ಪ ಸಮಯದವರೆಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ ಬಿದ್ದ ಮರವನ್ನು ತೆರವು ಗೊಳಿಸಿದ ನಂತರ ಮತ್ತೆ ರಸ್ತೆ ಸಂಚಾರ ಕ್ಕೆ ಮುಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT