ADVERTISEMENT

ನನ್ನ ಮತ ಖಾತ್ರಿ- ಯುವಜನರಿಂದ ಸಹಿ

ಜಿಲ್ಲಾಡಳಿತ ಹಮ್ಮಿಕೊಂಡಿರುವ ಆಂದೋಲನಕ್ಕೆ ಚಾಲನೆ; ಮತದಾನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 7:05 IST
Last Updated 25 ಏಪ್ರಿಲ್ 2018, 7:05 IST

ಬೆಳಗಾವಿ: ಭಯವಿಲ್ಲದೇ, ಧರ್ಮ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ನಮ್ಮ ಮತ ಚಲಾಯಿಸುತ್ತೇವೆ.

– ಹೀಗೆ ಘೋಷಿಸಿ ಒಬ್ಬೊಬ್ಬರಾಗಿ ಸಹಿ ಮಾಡುತ್ತಿದ್ದಂತೆ ನೆರೆದ್ದಿದವರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ಕೂಡ ಸಹಿ ಮಾಡುವ ಮೂಲಕ ಸಹಿ ಆಂದೋಲನಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ‘ನನ್ನ ನೆರಳು ನನ್ನ ಮೇಲೆ-ನನ್ನ ಮತ ನನ್ನ ಹಕ್ಕು’ ವಿಶೇಷ ಕಾರ್ಯಕ್ರಮವು ಮತದಾನದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಇದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಐಕಾನ್ ವಿಮಲಾಬಾಯಿ ಕದಂ ಅವರನ್ನು ಸತ್ಕರಿಸಲಾಯಿತು.

ದೇಶದ ಹಿತಕ್ಕಾಗಿ ಮತ ಚಲಾಯಿಸಿ: ಆರ್‌. ರಾಮಚಂದ್ರನ್ ಮಾತನಾಡಿ, ‘ವೈಯಕ್ತಿಕ ಸೇವೆ-ಸೌಲಭ್ಯ ಪಡೆಯಲು ಬ್ಯಾಂಕ್‌ ಮತ್ತು ರೇಷನ್ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವ ನಾವು ದೇಶದ ಹಿತಕ್ಕಾಗಿ ಸಾಲಿನಲ್ಲಿ ನಿಂತು ಕಡ್ಡಾಯವಾಗಿ ಮತ ಚಲಾಯಿಸಬೇಕು. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರ ಸಹಭಾಗಿತ್ವವು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗೆ ಅತ್ಯಗತ್ಯವಾಗಿದೆ. ಹೀಗಾಗಿ, ಎಲ್ಲ ಮಹಿಳೆಯರೂ ತಪ್ಪದೇ ಮತ ಚಲಾಯಿಸಬೇಕು’ ಎಂದು ತಿಳಿಸಿದರು.

‘ಮತದಾನ ನಮ್ಮ ಪವಿತ್ರ ಹಕ್ಕು. ಇದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದು ಎಸ್. ಜಿಯಾವುಲ್ಲಾ ಹೇಳಿದರು.

ಜಿಲ್ಲಾ ಪಂಚಾಯ್ತಿ ಬಳಿಯಿಂದ ಆರಂಭವಾದ ರ‍್ಯಾಲಿ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ನಡೆಯಿತು. ಅಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಮಹತ್ವ ಸಾರಲಾಯಿತು.

‘ನನ್ನ ಮತ ನನ್ನ ಹಕ್ಕು, ಮತದಾನ ಮಹಾದಾನ-ಐದು ವರ್ಷ ಸಮಾಧಾನ, ನನ್ನ ಮತ ನನ್ನ ಭವಿಷ್ಯ, ಮಾಡ ತಂಗಿ ಮತದಾನ-ದೇಶಕ್ಕಿದೆ ವರದಾನ, ಪ್ರತಿಶತ ಮತದಾನ-ಉತ್ತಮ ಸಮಾಜ ನಿರ್ಮಾಣ’ ಹೀಗೆ ಹಲವು ಘೋಷಣೆಗಳನ್ನು ವಿದ್ಯಾರ್ಥಿಗಳು ಹಾಕಿದರು.

ಜಿಲ್ಲಾ ಸ್ವೀ‍ಪ್‌ ಐಕಾನ್‌ ವಿಮಲಾಬಾಯಿ ಕದಂ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎ.ಎಲ್. ಪಾಟೀಲ, ಕಾಲೇಜಿನ ಉಪನ್ಯಾಸಕರು ಹಾಗೂ ಜಿಲ್ಲಾ ಪಂಚಾಯ್ತಿ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.