ADVERTISEMENT

ನೀರು ಪೂರೈಕೆಗೆ ಆಗ್ರಹಿಸಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 10:25 IST
Last Updated 19 ಜೂನ್ 2012, 10:25 IST

ಗೋಕಾಕ: ತಾಲ್ಲೂಕಿನ ಮೆಳವಂಕಿ ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರು ಇತ್ತೀಚೆಗೆ ತಾ.ಪಂ. ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಾ.ಪಂ. ಕಾರ್ಯಾಲಯದ ಎದುರು ಜಮಾಯಿಸಿದ್ದ ಕರವೇ ಕಾರ್ಯಕರ್ತರು ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಲ್ಲಿ ಗ್ರಾ.ಪಂ. ಮತ್ತು ತಾ.ಪಂ. ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಮೆಳವಂಕಿ ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತ್ಯೇಕ ಗ್ರಾ.ಪಂ ಮತ್ತು ಜಿ.ಪಂ ಕ್ಷೇತ್ರ ಹೊಂದಿರುವ ಮೆಳವಂಕಿಯ ಜನರು  ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಬೀರನಗಡ್ಡಿಯಿಂದ ಮೆಳವಂಕಿ ಗ್ರಾಮಕ್ಕೆ ನೀರು ಪೂರೈಕೆ ಸುಮಾರು 5 ಕಿ.ಮೀ. ದೂರದ ಪೈಪ್‌ಲೈನ್ ಮುಖಾಂತರ ವ್ಯವಸ್ಥೆ ಮಾಡಲಾಗಿದೆ. ಆದರೆ ಮಾರ್ಗದುದ್ದಕ್ಕೂ ಪೈಪ್‌ಲೈನಗೆ ಅಕ್ರಮವಾಗಿ ಸುಮಾರು 10 ರಿಂದ 15 ಕಡೆಗಳಲ್ಲಿ ನಳಗಳನ್ನು ಜೋಡಣೆ ಮಾಡಲಾಗಿದೆ.

ಇದರಿಂದ ಮೆಳವಂಕಿ ಮಾರ್ಗದ ಮಧ್ಯದಲ್ಲಿಯೇ ನೀರು ವ್ಯಯವಾಗುತ್ತಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಪೈಪ್‌ಲೈನ್‌ಗಳಿಗೆ ಕಾನೂನು ಬಾಹಿರವಾಗಿ ಅಳವಡಿಸಿರುವ ನಳಗಳನ್ನು ಕಿತ್ತೆಸೆಯುವಂತೆ ಒತ್ತಾಯಿಸಿದರು.

ವೇದಿಕೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ಸಾಧಿಕ್ ಹಲ್ಯಾಳ, ಯಲ್ಲಪ್ಪ ಕಟ್ಟಿಕಾರ, ಕೃಷ್ಣಾ ಬಂಡಿವಡ್ಡರ, ಅಬ್ಬಾಸ್ ದೇಸಾಯಿ, ಶಫೀ ಜಮಾದಾರ, ಜಂಭು ಚಿಕ್ಕೋಡಿ, ಮದರಸಾಬ್ ಮುಲ್ಲಾ, ನಾಗಪ್ಪ ಗದಾಡಿ, ಲಕ್ಕಪ್ಪ ಸಣ್ಣಲಗಮನವರ, ಮಾಳಪ್ಪ ನೇಸರಗಿ, ಅಪ್ಪಯ್ಯ ಕಟ್ಟಿಕಾರ, ರುದ್ರಪ್ಪ ಸಂಗ್ರೋಜಿಕೊಪ್ಪ, ಅಡಿವೆಪ್ಪ ತಿಗಡಿ, ಭೀಮಪ್ಪ ಯಡ್ರಾಂವಿ, ಪ್ರಕಾಶ ನೇಸರಗಿ   ಕೃಷ್ಣಾ ಖಾನಪ್ಪನವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.