ADVERTISEMENT

‘ನೋಟು ರದ್ದು ಮಾಡಿದವರಿಗೆ ವೋಟು ಬೇಡ’

ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 6:14 IST
Last Updated 4 ಮೇ 2018, 6:14 IST

ಬೆಳಗಾವಿ: ‘ನೋಟುಗಳ ಚಲಾವಣೆ ರದ್ದು ಮಾಡಿದವರಿಗೆ ಜನರು ವೋಟು ಬಂದ್ ಮಾಡುವ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಮಧ್ಯಪ್ರದೇಶದ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಕೋರಿದರು.

ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಪರ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಗರಿಷ್ಠ ಮುಖಬೆಲೆಯ ನೋಟುಗಳನ್ನು ಬಂದ್ ಮಾಡುವ ಮೂಲಕ ದೇಶದ 125 ಅಮಾಯಕರನ್ನು ಬಲಿ ಪಡೆದಿದೆ. ಈಗ ಎಟಿಎಂ ಎಂದರೆ ಎನಿ ಟೈಂ ಮನಿ ಅಲ್ಲ, ಆಯೇಗಾ ತಬೀ ತೋ ಮಿಲೇಗಾ ಎಂಬರ್ಥವಾಗಿದೆ’ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರ ವಿರುದ್ಧ ಷಡ್ಯಂತ್ರ ಮಾಡಿದೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ಬಣ್ಣ ಬಣ್ಣದ ಮಾತುಗಳನ್ನು ಆಡಿದ್ದರು. ಯುವಕರಿಗೆ ಉದ್ಯೋಗ ಕೊಡುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಜನರ ಆಸೆಗಳನ್ನು ನುಚ್ಚುನೂರು ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ದೇಶದ ಪಾಲಿನ ಮೊದಲ ದೇವರು ಅನ್ನದಾತರಾದ ರೈತರು. ದೇಶದ ಭವಿಷ್ಯ ರೂಪಿಸುವ ಮತದಾರ 2ನೇ ದೇವರು. ಮತದಾರ ಸಾಮಾನ್ಯ ಅಲ್ಲ. ಶ್ರೇಷ್ಠ ನಾಯಕನನ್ನು ರೂಪಿಸುವ ತಾಕತ್ತು ಇದೆ. ಒಂದು ವೇಳೆ ನಾಯಕ ದ್ರೋಹ ಬಗೆದರೆ ಅವನನ್ನು ಮೂಲೆಗುಂಪು ಮಾಡುವ ತಾಕತ್ತನ್ನು ಕೂಡ ಹೊಂದಿದ್ದಾರೆ’ ಎಂದರು.

‘ಕರ್ನಾಟಕದ ಚುನಾವಣೆಯ ಫಲಿತಾಂಶದ ಸಂದೇಶ, ಇಡೀ ದೇಶದಲ್ಲಿ ಮೊಳಗಲಿದೆ. ಹೀಗಾಗಿ, ಜನರ ಪರವಾಗಿರುವ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಕೋರಿದರು.

‘ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವು ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ. ಕೇಂದ್ರ ಸರ್ಕಾರ ಉದ್ಯಮಿಗಳ ₹ 4.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲ ಮನ್ನಾ ಮಾಡದೆ ದ್ರೋಹ ಬಗೆದಿದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸಬೇಕು. ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಕೂಡಿ ರಾಜ್ಯವನ್ನೇ ಲೂಟಿ ಮಾಡಿದಾಗ ಮೋದಿ ಸುಮ್ಮನೆ ಇದ್ದಿದ್ದು ಏಕೆ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.