ಬೆಳಗಾವಿ: ತಾಲ್ಲೂಕಿನ ಕುದ್ರೇಮನಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಧಾನ್ಯ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಕುದ್ರೇಮನಿ ಗ್ರಾಮಸ್ಥರು, ಸುರೇಶ ಪಾಟೀಲ ಎಂಬುವವರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ 152ರಲ್ಲಿ ಗ್ರಾಹಕರಿಗೆ ಒಂದು ಅಥವಾ ಎರಡು ದಿನ ಮಾತ್ರ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಇವರು, ಸಮಿತಿಯ ಸದಸ್ಯರಿಗೆ ಹೆಚ್ಚಿನ ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಗ್ರಾಹಕರಿಗೆ ನಿಗದಿಪಡಿಸಿರುವಷ್ಟು ಆಹಾರ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕಡಿಮೆ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಈ ಬಗ್ಗೆ ಕೇಳಲು ಹೋದರೆ, ನೀವು ಬಿಜೆಪಿಯವರು, ನಿಮ್ಮ ಶಾಸಕರ ಕಡೆಯೇ ಹೋಗಿ ಹೆಚ್ಚಿನ ಧಾನ್ಯ ಪಡೆದುಕೊಳ್ಳಿ ಎಂದು ತೊಂದರೆ ನೀಡುತ್ತಿದ್ದಾರೆ. ಜನರ ನುಡುವೆ ರಾಜಕೀಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇವರು ತಾರತಮ್ಯ ಮಾಡುವುದರಿಂದ ಕೂಡಲೇ ಇವರ ನ್ಯಾಯಬೆಲೆ ಅಂಗಡಿಯ ಪರವಾನಿಗೆ ರದ್ದುಪಡಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹೆಸರಿಗೆ ಪಡಿತರ ಧಾನ್ಯ ವಿತರಿಸುವ ಪರವಾನಿಗೆ ನೀಡಬೇಕು. ಇದರಿಂದ ಎಲ್ಲರಿಗೂ ನ್ಯಾಯಯುತವಾಗಿ ಆಹಾರ ಧಾನ್ಯ ಸಿಗಲಿದೆ ಎಂದು ಹೇಳಿದ್ದಾರೆ.
ಸುರೇಶ ಪಾಟೀಲರ ಪರವಾನಿಗೆ ರದ್ದು ಮಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹೆಸರಿಗೆ ಪರವಾನಿಗೆ ನೀಡದಿದ್ದರೆ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮುಖಂಡರಾದ ಯಲ್ಲಪ್ಪ ಪಾಟೀಲ, ಸಂಜಯ ಪಾಟೀಲ, ಸಂದೀಪ ಪಾಟೀಲ, ಉಮಾಜಿ ಪಾಟೀಲ, ರಾಜಾರಾಮ, ಶಿವಾಜಿ ನಾಯ್ಕ, ಗಂಗಾ ಪಾವುಸ್ಕರ, ಲಕ್ಷ್ಮಿ ನಾಯ್ಕ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.