ಅದು 2007ರ ಪುಣೆಯ ಪ್ರತಿಷ್ಠಿತ ಸವಾಯಿ ಗಂಧರ್ವ ಸಂಗೀತ ಮಹೋತ್ಸವದ ಸಂದರ್ಭ. ಸಂಗೀತೋತ್ಸವದ ಎರಡನೇ ದಿನ. ನಿರೂಪಕ ಆನಂದ ದೇಶಮುಖ ಅವರು ಮಾತನಾಡುತ್ತ, ಇನ್ನು ಮುಂದೆ ಧಾರವಾಡದ ಪಂ. ವೆಂಕಟೇಶಕುಮಾರ ಅವರಿಂದ ಗಾನ ಲಹರಿ ಹರಿದು ಬರಲಿದೆ ಎಂದು ಪ್ರಕಟಿಸಿದಾಗ ನೆರೆದಿದ್ದ ಬಹುಜನ ಶ್ರೋತೃಗಳು ಹಣೆ ಗಂಟಿಕ್ಕಿ ಕೌನ್ ಹೈ ವೆಂಕಟೇಶಕುಮಾರ್ ? ಹಮ್ ಪೆಹಲಿ ಬಾರ್ ಎ ನಾಮ್ ಸುನ್ ರಹೆಂ ಹೈ. ಕೈಸೆ ಗಾತೆ ಹೈಂ? ಎಂದು ತಮ್ಮ ತಮ್ಮಳಗೆ ಮಾತನಾಡುತ್ತಿದ್ದರು. ಮುಂದಿನ ಕೆಲವೇ ನಿಮಿಷಗಳಲ್ಲಿ ಪ್ರಾರಂಭವಾಯಿತಲ್ಲ ಪಂ. ವೆಂಕಟೇಶಕುಮಾರ ಅವರ ಗಾನ ವೈಭವ.
ಅವರು ಪ್ರಸ್ತುತಪಡಿಸಿದ ರಾಗ ಮಾರುಬಿಹಾಗ. ಭಾವ ಹಾಗೂ ಸ್ವರ ಕಲ್ಪನೆಯೊಂದಿಗೆ ಅವುಗಳಿಗೆ ಜೀವ ತುಂಬುತ್ತ ಸುಮಾರು ಎರಡು ತಾಸುಗಳ ಕಾಲ ನೆರೆದ ಶ್ರೋತೃಗಳನ್ನು ಮೂಕವಿಸ್ಮಿತಗೊಳಿಸಿದ್ದು ಈಗ ಇತಿಹಾಸ. ಮೊದಲು ಹಣೆ ಗಂಟ್ಟಿಕ್ಕಿದ್ದ ಶ್ರೋತೃಗಳು ಉಲ್ಲಾಸಭರಿತರಾಗಿ, ಪಂ. ವೆಂಕಟೇಶಕುಮಾರಜೀ ಕೆ ಗಾಯನ್ ಕಾ ವರ್ಣನ್ ಕರನೇ ಕೆ ಲಿಯೆ ಹಮಾರೆ ಪಾಸ್ ಅಲ್ಫಾಜ್ ನಹೀಂ ಎನ್ನುತ್ತ ಹಲವಾರು ಸಂಗೀತ ರಸಿಕರು ಅವರಿಗೆ ಅಭಿನಂದನೆ ಸಲ್ಲಿಸಲು ಗ್ರೀನ್ ರೂಮ್‌ನತ್ತ ಹೆಜ್ಜೆ ಹಾಕಿದರು. ಇದು ಪಂ. ವೆಂಕಟೇಶಕುಮಾರ ಅವರ ಗಾಯನ ಮೋಡಿ.
ಬಿಳಿಯ ಸಾದಾ ಪೈಜಾಮ್, ಮೇಲೊಂದು ನೆಹರು ಶರ್ಟ್, ತೊಡೆಯ ಮೇಲೆ ಕೆಂಪು ಬಣ್ಣದ ಶಾಲನ್ನು ಹೊದ್ದುಕೊಂಡು ವೇದಿಕೆ ಏರಿ ತಂಬೂರಿಯ ಮಧ್ಯೆ ಕುಳಿತು ಗಾಯಕಿಯನ್ನು ಪ್ರಾರಂಭಿಸಿದರೆ ವಾಗ್ದೇವಿಯ ದರ್ಶನ. ಗೋದಿ ಬಣ್ಣದ ದುಂಡು ಮೊಗದ ವೆಂಕಟೇಶಕುಮಾರ ಅವರ ಗಾಯನವೆಂದರೆ ಆಲಿಸುವವನ ಅಸ್ತಿತ್ವವನ್ನೇ ಕರಗಿಸಿ ಅಮೂರ್ತ ಭಾವ ಪ್ರಪಂಚದಲ್ಲಿ ಲೀನಗೊಳಿಸುವಂಥದ್ದು.
ಅಗ್ರಪಂಕ್ತಿಯ ಗಾಯಕ: 1953 ಜುಲೈ 1ರಂದು ಕಲೋಪಾಸಕರ ಮನೆತನದಲ್ಲಿ ಜನಿಸಿದ ಪಂ. ವೆಂಕಟೇಶಕುಮಾರ ಅವರ ಹುಟ್ಟೂರು ಬಳ್ಳಾರಿ ಜಿಲ್ಲೆಯ ಪುಟ್ಟ ಗ್ರಾಮ ಲಕ್ಷ್ಮೀಪುರ. ತಂದೆ ಹೂಲೆಪ್ಪ. ಬಯಲಾಟದ ಕಲಾವಿದರು ಹಾಗೂ ಕೊಂಚ ಮಟ್ಟಿಗೆ ಕರ್ನಾಟಕಿ ಸಂಗೀತವನ್ನು ಕಲಿತವರು. ಚಿಕ್ಕಪ್ಪ ಎರ‌್ರಿಸ್ವಾಮಿ ನಾಟಕ ಮಾಸ್ತರ. ಇನ್ನು ಸೋದರಮಾವ ಬೆಳಗಲ್ ವೀರಣ್ಣನವರು ನಾಡಿನ ಸುವಿಖ್ಯಾತ ರಂಗಕರ್ಮಿ, ಜಾನಪದ ಕಲಾವಿದರು. ಇಂಥ ಹಿನ್ನೆಲೆಯುಳ್ಳ ವೆಂಕಟೇಶಕುಮಾರ ಅವರಿಗೆ ಸಹಜವಾಗಿ ಬಾಲ್ಯದಿಂದಲೇ ಸಂಗೀತದತ್ತ ಅಭಿರುಚಿ.
ಸಂಗೀತ ಸಾಧಕರ ತಪೋಧಾಮ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ. ಪುಟ್ಟರಾಜ ಗವಾಯಿಗಳ ಪದತಲದಲ್ಲಿ ಕುಳಿತು ಆಳವಾದ ಶಾಸ್ತ್ರೋಕ್ತ ಸಂಗೀತಾಧ್ಯಯನ. ಹೀಗಾಗಿ ಬಾಲ್ಯದಿಂದಲೇ ಅವರ ನರ-ನಾಡಿಗಳಲ್ಲಿ ಹರಿದು ಬಂದ ಸಂಗೀತ ಗಂಗೆಯು ಶ್ರೇಷ್ಠ ಗಾಯಕನಲ್ಲಿ ಉಸಿರು, ಯೋಗ, ತಪಸ್ಸಾಗಿ ರಸಯಾತ್ರೆಗೈದು, ಧಾರವಾಡದ ಅವಿಚ್ಛಿನ್ನ ಪರಂಪರೆಯ ಸಂಗೀತ ಸೌಧವನ್ನು ಶೃಂಗರಿಸಿ ವಿರಾಜಮಾನಳಾಗಿದ್ದಾಳೆ. ವೆಂಕಟೇಶಕುಮಾರ ಈಗ ಹಿಂದುಸ್ತಾನಿ ಸಂಗೀತ ಕ್ಷೇತ್ರ ಅಗ್ರಪಂಕ್ತಿಯ ಗಾಯಕ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಎಂ. ವೆಂಕಟೇಶಕುಮಾರ ಅವರಿಗೆ ಇದೇ 15ರಂದು ಸಂಜೆ 5.30 ಗಂಟೆಗೆ ಧಾರವಾಡದ ಡಾ. ಅಣ್ಣಾಜಿ ರಾವ್ ಸಿರೂರ ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ತನ್ನಿಮಿತ್ತ ಲೇಖನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.