ADVERTISEMENT

ಪಟ್ಟಣ ಜನಾಶೀರ್ವಾದ ಯಾತ್ರೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 5:27 IST
Last Updated 15 ಏಪ್ರಿಲ್ 2018, 5:27 IST

ರಾಮದುರ್ಗ: ಡಾ. ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಶನಿವಾರ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಮತ್ತೊಮ್ಮೆ ಜನಾಶೀರ್ವಾದ ಯಾತ್ರೆ ನಡೆಸಿ, ಅವರಾದಿಯಿಂದ ರಾಮದುರ್ಗ ಪಟ್ಟಣದವರೆಗೆ (15 ಕಿ.ಮೀ) ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ 9ಕ್ಕೆ ಅವರಾದಿ ಗ್ರಾಮದಿಂದ ಪ್ರಾರಂಭಗೊಂಡ ಪಾದಯಾತ್ರೆ 10ಕ್ಕೆ ಸುರೇಬಾನ–ಮನಿಹಾಳ ಮಧ್ಯಭಾಗದ ಆತ್ಮಾನಂದ ರಂಗಮಂದಿರಕ್ಕೆ ತಲುಪಿತು. ಅಲ್ಲಿ ಮಾತನಾಡಿದ ಪಟ್ಟಣ, ‘ತಾಲ್ಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಕೋರಿದರು.

ನಂತರ ಪಾದಯಾತ್ರೆ ರಾಮದುರ್ಗದ ಮುಖ್ಯರಸ್ತೆ ಮುಖಾಂತರ ಗೊಣ್ಣಾಗರ ತಲುಪಿತು. ಅಲ್ಲಿಂದ ಹುಲಿಗೊಪ್ಪ ಮಾರ್ಗವಾಗಿ ಕೊಳಚಿ ತಲುಪಿತು. ಮಧ್ಯಾಹ್ನ ಘಟಕನೂರು ಗ್ರಾಮದಲ್ಲಿ ಊಟ ಹಾಗೂ ವಿಶ್ರಾಂತಿ ನಂತರ ಚಿಂಚಖಂಡಿ ಪ್ರವೇಶ ಮಾಡಿ ಅಲ್ಲಿನ ರೈತರೊಂದಿಗೆ ಶಾಸಕರು ಮಾತುಕತೆ ನಡೆಸಿ, ಮತಯಾಚನೆ ಮಾಡಿದರು.

ADVERTISEMENT

ನಂತರ ದೊಡ್ಡಮಂಗಡಿ ಮಾರ್ಗವಾಗಿ ರಾಮದುರ್ಗದ ಕುದುರೆ ಬಯಲಿನಲ್ಲಿ ಹಮ್ಮಿಕೊಂಡಿದ್ದ ಮುಖ್ಯ ವೇದಿಕೆಗೆ ಪಾದಯಾತ್ರೆ ತಲುಪಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶಿದ್ಲಿಂಗಪ್ಪ ಶಿಂಗಾರಗೊಪ್ಪ, ಪುರಸಭೆ ಅಧ್ಯಕ್ಷ ಅಶೋಕ ಸೂಳಿಬಾಂವಿ, ಸದಸ್ಯರಾದ ರಾಜು ಮಾನೆ, ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ರಮೇಶ ಬಂಡಿವಡ್ಡರ, ಹೆಸ್ಕಾಂ ನಿರ್ದೇಶಕ ಮಹಾಂತೇಶ ಉಮತಾರ, ಖಾದಿ ಮಂಡಳಿ ನಿರ್ದೇಶಕ ಜಯಪ್ರಕಾಶ ಸಿಂಧೆ, ಎಪಿಎಂಸಿ ಅಧ್ಯಕ್ಷ ಬಿ.ಎಂ.ಪಾಟೀಲ, ಬಸವರಾಜ್ ಪ್ಯಾಟಿಗೌಡ್ರ, ಜಿ.ಬಿ. ರಂಗನಗೌಡ್ರ, ಬಾಳಪ್ಪ ಹಂಜಿ ಸೇರಿದಂತೆ ನೂರಾರು ಬೆಂಬಲಿಗರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕುದುರೆ ಬಯಲಿನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.

ಅಂಬೇಡ್ಕರ್‌ ಜಯಂತಿ ಅಂಗವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದ ಶಾಸಕ ಅಶೋಕ ಪಟ್ಟಣ ಹಾಗೂ ಅವರ ಬೆಂಬಲಿಗರು ಕರಪತ್ರಗಳಲ್ಲಿ ಡಾ.ಅಂಬೇಡ್ಕರರ ಭಾವಚಿತ್ರ ಹಾಕದೇ ಇರುವುದನ್ನು ಕೆಲವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.