ಬೆಳಗಾವಿ: `ಮುಂಬೈನ ಅಖಿಲ ಭಾರತೀಯ ಮಹಾವಿದ್ಯಾಲಯ ಮಂಡಳದ ವಾರ್ಷಿಕ ಪದವಿ ಪ್ರದಾನ ಸಮಾರಂಭ ಜೂ. 16 ರಂದು ಸಂಜೆ 4 ಕ್ಕೆ ಹಿಂದವಾಡಿಯ ಮಹಾವೀರ ಭವನದಲ್ಲಿ ನಡೆಯಲಿದೆ' ಎಂದು ಸಂಗೀತ ಕಲಾ ಮಂಚ್ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಹಾಗೂ ಅಖಿಲ ಭಾರತೀಯ ಮಹಾವಿದ್ಯಾಲಯ ಮಂಡಳದ ರೆಜಿಸ್ಟ್ರಾರ್ ಮಧುಸೂದನ ಆಪ್ಟೆ ಆಗಮಿಸುವರು.
ಮಧುಸೂದನ ಆಪ್ಟೆ ಅವರು 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಮಂಡಳದ ಪ್ರಥಮ ಪದವಿ ಪ್ರದಾನ ಸಮಾರಂಭ ಇದಾಗಿದೆ ಎಂದು ತಿಳಿಸಿದರು.
ಬೆಳಿಗ್ಗೆ 10 ರಿಂದ 12 ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪದವಿ ಪಡೆದವರಲ್ಲಿ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಅಂಜಲಿ ದಾಣಿ, ಸಚಿನ್ ಕಾಸೋಟೆ, ಸ್ವೀಕಾರ ಕಟ್ಟಿ, ಅಸಾವರಿ ಪಾಟಣಕರ, ಸಾರಂಗ ಭಂಡಾರೆ, ಸುಧೀರ ಪೋಟೆ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವರು.
ಮಧ್ಯಾಹ್ನ 3ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದರು.ಅಖಿಲ ಭಾರತೀಯ ಮಹಾವಿದ್ಯಾಲಯ ಮಂಡಳದ ವತಿಯಿಂದ ರಾಷ್ಟ್ರವ್ಯಾಪಿ 1,100 ಶಾಖೆಗಳಲ್ಲಿ ಸಂಗೀತ, ನೃತ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದೇಶದಲ್ಲಿಯೂ 16 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮಂಡಳದ ವತಿಯಿಂದ ಸಂಗೀತ ಶಿಕ್ಷಣ ಪಡೆದು ಹಲವಾರು ವಿದ್ಯಾರ್ಥಿಗಳು ಪ್ರಸಿದ್ಧ ಸಂಗೀತ ಕಲಾವಿದರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.
ಸ್ವರೂಪ ಇನಾಮದಾರ, ಪ್ರೊ. ಅರುಣಾ ನಾಯ್ಕ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.