ADVERTISEMENT

ಪರಿಹಾರಕ್ಕಾಗಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 9:17 IST
Last Updated 19 ಏಪ್ರಿಲ್ 2013, 9:17 IST

ಬೆಳಗಾವಿ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಅಪಾರ ನಷ್ಟವನ್ನು ಅನುಭವಿಸಿ ಅತಂತ್ರ ಸ್ಥಿತಿಗೆ ಸಿಲುಕಿದ ಆಲೂಗಡ್ಡೆ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸತತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಬೆಳೆದ ಆಲೂಗಡ್ಡೆ ಬೆಳೆ ನಾಶವಾಗಿದೆ. ಆಲೂಗಡ್ಡೆ ಬೆಳಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ. ಆಲೂಗಡ್ಡೆ ಬೆಳೆಗಳನ್ನು ಬೆಳೆಯಲು ಖಾಸಗಿ ಬ್ಯಾಂಕುಗಳು ಹಾಗೂ ಸೊಸೈಟಿಗಳಿಂದ ಸಾಲವನ್ನು ಪಡೆದಿದ್ದು, ಆ ಸಾಲವನ್ನು ಮರುಪಾವತಿಸಲು ರೈತರು ಶಕ್ತರಾಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ಖಾಸಗಿ ಬ್ಯಾಂಕುಗಳು ಹಾಗೂ ಸೊಸೈಟಿಗಳು ರೈತರ ಭಾವನೆಗಳಿಗೆ ಸ್ಪಂದಿಸದೇ ಕೋರ್ಟ್ ಮುಖಾಂತರ ಸಮನ್ಸ್, ವಾರೆಂಟ್ ಕಳುಹಿಸಿ, ರೈತರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿವೆ. ಈ ಕುರಿತು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಆದ ಕಾರಣ ಎಲ್ಲ ರೈತರು ಸತ್ಯಾಗ್ರಹ ನಡೆಸುತ್ತಿದ್ದು, ಸರ್ಕಾರವು ತಮ್ಮ ಬೇಡಿಕೆಗೆ ಶೀಘ್ರ ಸ್ಪಂದಿಸಿ ಸೂಕ್ತ ಪರಿಹಾರ ವಿತರಣೆ ಮಾಡಬೇಕು ರೈತರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ  ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಹೇಬ ದೇಸಾಯಿ, ಮಾರುತಿ ಕಡೇಮನಿ,
ಅಪ್ಪಯ್ಯ ಪಾಟೀಲ, ರಾಮಚಂದ್ರ ಫೋಕಡೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.