ಚನ್ನಮ್ಮನ ಕಿತ್ತೂರು: ‘ಚನ್ನಮ್ಮನಿಗೆ ಸಂಬಂಧಿಸಿದ ಸ್ಮಾರಕಗಳ ಅಭಿವೃದ್ಧಿಗೆ ಗಮನ ನೀಡುವ ಮೂಲಕ ಕಿತ್ತೂರು ಪಟ್ಟಣವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಬಹುದಾಗಿದೆ’ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿ ವಿ.ಬಿ. ಪಾಟೀಲ ಅಭಿಪ್ರಾಯಪಟ್ಟರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿಯೂ ಆಗಿರುವ ಅವರು ಮೊದಲ ಬಾರಿಗೆ ಮಂಗಳವಾರ ಇಲ್ಲಿ ಭೇಟಿ ನೀಡಿದ ನಂತರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಅನುಷ್ಠಾನ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
‘ಕೋಟೆಯ ಒಳಗಡೆಯ ಪ್ರದೇಶ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಹೊರಗಡೆಯ ಪ್ರದೇಶವನ್ನು ಪ್ರಾಧಿಕಾರದಡಿ ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು.
‘ರಾಣಿ ಚನ್ನಮ್ಮನ ಅಶ್ವಾರೂಢ ಪುತ್ಥಳಿಯಿಂದ ಕೋಟೆವರೆಗೆ ರಸ್ತೆ ಅಭಿವೃದ್ಧಿ, ಬೆಳಕಿನ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಮಾಡಲಾಗಿದೆ. ತುಂಬುಗೆರೆ ಅಭಿವೃದ್ಧಿ ಕೂಡಾ ಇದೇ ಇಲಾಖೆಯಡಿ ನಡೆಯುತ್ತಿದೆ’ ಎಂದು ಅವರು ಹೇಳಿದರು.
‘ದ್ವಿಪಥದ ರಸ್ತೆಯ ವಿಭಜಕ ಮಧ್ಯೆ ವಿದ್ಯುತ್ ಕಂಬ ನಿಲ್ಲಿಸಿ ಬೆಳಕಿನ ವ್ಯವಸ್ಥೆ ಮಾಡಿದರೆ ಒಳ್ಳೆಯದಿತ್ತು. ರಸ್ತೆಗೆ ಬೆಳಕು ಬೀರುವುದು ಮುಖ್ಯವಲ್ಲ. ಈ ವ್ಯವಸ್ಥೆಯಲ್ಲಿ ಸೌಂದರ್ಯಕರಣವೂ ಪ್ರಮುಖವಾಗಿರುತ್ತದೆ’ ಎಂದು ಅವರು ಸೂಚಿಸಿದರು.
ದ್ವಿಪಥದ ರಸ್ತೆ ಬದಿಗೆ ಅತಿಕ್ರಮಣವಾಗಿದ್ದರೆ ಲೋಕೋಪಯೋಗಿ ಇಲಾಖೆಯವರು ಅದನ್ನು ತೆರವುಗೊಳಿಸಬೇಕು. ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿಯೂ ಅವರು ಭರವಸೆ ನೀಡಿದರು.
ಕೋಟೆಯ ಒಳಗಡೆ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಸಾಗಿರುವ ಕೆಲಸಗಳು ನಿಧಾನ ಗತಿಯಿಂದ ಸಾಗಿವೆ. ಈ ಬಗ್ಗೆ ಅವರಿಗೆ ಬೇಗ ಕಾಮಗಾರಿ ಪೂರೈಸುವಂತೆ ಪತ್ರ ಬರೆಯಲು ಸಭೆಯಲ್ಲಿದ್ದ ಪ್ರಾಧಿಕಾರದ ಆಯುಕ್ತ ಹಾಗೂ ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ವಿಜಯಕುಮಾರ ಹೊನಕೇರಿ ಅವರಿಗೆ ಸೂಚಿಸಿದರು.
ಪ್ರಾಧಿಕಾರದಡಿ ಕೈಗೊಂಡಿರುವ ಕಾಮಗಾರಿಗಳ ಉಸ್ತುವಾರಿಗೆ ಒಬ್ಬರನ್ನು ಹೊರಗುತ್ತಿಗೆ ಆಧಾರ ಮೇಲೆ ನೇಮಿಸಿಕೊಳ್ಳುವಂತೆ ಸಲಹೆ ಮಾಡಿದ ಪ್ರಾದೇಶಿಕ ಆಯುಕ್ತರು, ಇದರಿಂದ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅನುಕೂಲವಾಗಲಿದೆ ಎಂದರು.
ಪ್ರಾಧಿಕಾರದಲ್ಲಿ ₨ 3.62 ಕೋಟಿ ಜಮೆಯಿದ್ದು, ಸರ್ಕಾರದಿಂದ ಈ ವರ್ಷ ಬರಬೇಕಾಗಿರುವ ₨ 75ಲಕ್ಷ ದುಡ್ಡು ಸಂದಾಯ ಮಾಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದರು.
ಬೈಲಹೊಂಗಲ ತಹಶೀಲ್ದಾರ್ ವಿನಾಯಕ ಪಾಲನಕರ, ವಿಶೇಷ ತಹಶೀಲ್ದಾರ್ ಎಸ್. ಟಿ. ಯಂಪುರೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಕೆ.ಜಿ. ಕಡೇಳಿ, ಆರ್.ಎಸ್. ಬಲೋಲ, ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಕೆ. ವಂಟಗೂಡಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಪಾಟೀಲ, ಕಂದಾಯ ನಿರೀಕ್ಷಕ ಆರ್.ಎನ್. ಪಾಗಾದ, ಭೂಸೇನಾ ನಿಗಮದ ಮಲ್ಲಿಕಾರ್ಜುನಗೌಡ, ನಿವೃತ್ತ ಎಂಜಿನಿಯರ್ ಬಸವರಾಜ ಗದವಾಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.