ADVERTISEMENT

ಬಂತು ಉತ್ಸವ... ಶುರುವಾಯ್ತು ತೇಪೆ ಕೆಲಸ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 7:50 IST
Last Updated 14 ಅಕ್ಟೋಬರ್ 2011, 7:50 IST

ಚೆನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚೆನ್ನಮ್ಮಾಜಿಯ ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಣೆಯ ಐತಿಹಾಸಿಕ `ಕಿತ್ತೂರು ಉತ್ಸವ~ ಆಚರಣೆ ಇದೇ 23ರಿಂದ 25ರವರೆಗೆ ನಡೆಯ ಲಿದ್ದು, ಪೂರ್ವಭಾವಿಯಾಗಿ ಕೆಟ್ಟ ರಸ್ತೆಗೆ ತೇಪೆ ಹಾಕುವುದು, ಕೋಟೆ ಆವರಣ, ಮುಖ್ಯ ಬೀದಿ ಸ್ವಚ್ಛಗೊಳಿಸುವ ಕೆಲಸ ಭರದಿಂದ ಪಟ್ಟಣದಲ್ಲಿ ನಡೆದಿದೆ.

~ಬೆಂಕಿ ಬಿದ್ದಾಗಲೇ ಬಾವಿ ತೋಡುವ ಪ್ರವೃತ್ತಿ~ಗೆ ಜೋತು ಬಿದ್ದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತರಾತುರಿ ಕೆಲಸಕ್ಕೆ ಮಳೆರಾಯ ಅಡಚಣೆಯಾಗಿ ಪರಿಣಮಿಸಿದ್ದಾನೆ. ಬುಧವಾರ ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ಉತ್ಸವ ಸಿದ್ಧತೆಯಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಗುರುವಾರದ ಕೆಲ ಕಾಮಗಾರಿಗಳಿಗೆ ಸ್ವಲ್ಪ ತೊಂದರೆಯಾಯಿತು.

ಕೋಟೆ ಆವರಣದೊಳಗಿರುವ `ರಿಂಗ್ ರೋಡ್~ ಅಕ್ಕಪಕ್ಕ ಬೆಳೆದು ನಿಂತಿದ್ದ ಕಸ, ಕಂಟಿ, ಫುಟ್‌ಪಾತ್ ಸ್ವಚ್ಛಗೊಳಿಸುವ ಕೆಲಸ ಒಂದೆಡೆ ಸಾಗಿದೆ. ಅಶ್ವಾರೂಢ ಚನ್ನಮ್ಮ ಪ್ರತಿಮೆಯಿಂದ ಪಟ್ಟಣದೊಳಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ವಿಭಜಕ, ಫುಟ್‌ಪಾತ್‌ಗಳಿಗೆ ಬಣ್ಣ ಬಳಿಯುವ ಕಾಮಗಾರಿಯೂ ಪ್ರಗತಿಯಲ್ಲಿದೆ.

ಇದನ್ನು ಹೊರತುಪಡಿಸಿದರೆ, ಅರಳಿಕಟ್ಟಿ ವೃತ್ತದಿಂದ ಗೊಂಬಿಗುಡಿಯವರೆಗೆ ಈಗಾಗಲೇ ಕೆಲಸ ನಡೆದು ಅರ್ಧಕ್ಕೆ ನಿಂತಿದ್ದ ರಸ್ತೆ ಡಾಂಬರಿಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಪಟ್ಟಣದ ಹದಗೆಟ್ಟು ಹೋಗಿರುವ ರಸ್ತೆಗಳನ್ನು ಅಲ್ಲಲ್ಲಿ ಸುಧಾರಿಸುವುದಕ್ಕೂ ಆದ್ಯತೆ ನೀಡಲಾಗಿದೆ. 

`ಹೇಗಾದರೂ ಸರಿ ನಿಗದಿತ ಕಾರ್ಯಗಳನ್ನು ಉತ್ಸವ ಆರಂಭದ ಮುನ್ನಾದಿನದ ವರೆಗೂ ಮಾಡಿ ಮುಗಿಸುವ ಉತ್ಸಾಹ ಅಧಿಕಾರಿಗಳಲ್ಲಿ ಇದ್ದಂತಿದೆ. ಹೀಗಾಗಿ ಕೆಲಸದ ಗುಣಮಟ್ಟ ಸಮಾಧಾನ ತರುವಂತಿಲ್ಲ~ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿದೆ.

ಹಾಗೇ ಇರುವ ದುಡ್ಡು
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರಾ ಗಿದ್ದ ರೂ.8ಕೋಟಿಯಲ್ಲಿ ಈಗಾಗಲೇ ರೂ. 4.44 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾ ಗಿದೆ. ದುಡ್ಡಿನ ಜೊತೆಗೆ, ಮಾಡಿರುವ ಕೆಲ ಕಾಮ ಗಾರಿಗಳು ಹೆಳ ಹೆಸರಿಲ್ಲದಂತಾಗಿವೆ.

ಖರ್ಚು ಮಾಡಿ ಉಳಿದಿರುವ ದುಡ್ಡು ರೂ. 3.56ಕೋಟಿ ಇನ್ನೂ ಹಾಗೆ ಇದೆ. `ಮಳೆನಿಂತಾಗ ಈ ಕೆಲಸ ಗಳನ್ನು ಉತ್ಸವ ತಿಂಗಳಿನ ಸಾಕಷ್ಟು ಮೊದಲೇ ಪ್ರಾರಂಭಿಸಬೇಕಿತ್ತು. ಆದರೆ ಆಡಳಿತ ನಡೆಸುವ ವರಿಗೆ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳಿಗೆ ತುರ್ತು ಕಾರ್ಯಗಳ ಆದ್ಯತೆ.

ಇದರಿಂದಾಗಿಯೇ ಉತ್ಸವ ಆಚರಣೆ ಹೊಸ್ತಿಲಲ್ಲಿರುವ ಈ ಸಂದರ್ಭ ದಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಲಾಗಿದೆ~ ಎಂಬ ಆರೋಪ ಇಲ್ಲಿ ಮಾರ್ದನಿಸುತ್ತಿದೆ.

ದಾರಿ ಬಿಡಿ: ಕಿತ್ತೂರು ಉತ್ಸವ ಆಚರಣೆಯಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ ಎಂಬ ಆಸೆಯಿಟ್ಟುಕೊಂಡು ಬೀದಿ ಬದಿಯ ವ್ಯಾಪಾರಿಗಳು ಕಿತ್ತೂರಿಗೆ ದೌಡಾಯಿಸುತ್ತಿದ್ದಾರೆ. ಇವರ ಜೊತೆ ಯಲ್ಲೇ ಉತ್ಸವದ ಕಳೆ ಹೆಚ್ಚಿಸಲು ವೈವಿಧ್ಯಮಯ ಆಟಗಳ ~ಫ್ರಂಟ್ ಡೆಕಾರೇಶನ್~ದವರ ಆಗಮನವಾಗಿದೆ. ತೊಟ್ಟಿಲಗಳು, ಮಕ್ಕಳು ತಿರುಗುವ ಮೋಟಾರ್‌ಗಳನ್ನು ಜೋಡಿಸುವ ಪ್ರಾಥಮಿಕ ಕಾರ್ಯವನ್ನು ಅವರು ಪ್ರಾರಂಭಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.