ADVERTISEMENT

ಬರ: ಜಿಲ್ಲೆಗೆ ರೂ 7 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 10:10 IST
Last Updated 14 ಜುಲೈ 2012, 10:10 IST

ಬೆಳಗಾವಿ: ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಮುಂದುವರಿಸಲು ಮತ್ತೆ 7 ಕೋಟಿ ರೂಪಾಯಿಗಳನ್ನು ಮಂಜೂರು ಮಾಡ ಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್ ನಡೆಸಿ ಮಾತನಾಡುತ್ತಿದ್ದ ಅವರು, ಬರ ಪರಿಹಾರ ಕಾಮಗಾರಿಗಳಿಗಾಗಿ ಯಾವುದೇ ಹಣಕಾಸಿನ ಕೊರತೆಯಿಲ್ಲ. ಜಿಲ್ಲೆಗೆ ಮತ್ತೆ 7 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದ್ದು, ಜನರಿಗೆ ಉದ್ಯೋಗ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳ ಬೇಕೆಂದು ಹೇಳಿದರು.

ಬರ ಪರಿಹಾರ ಕಾಮಗಾರಿಗಳನ್ನು ಇನ್ನೂ ಹೆಚ್ಚು ಚುರುಕುಗೊಳಿಸಬೇಕಾಗಿರುವುದು ಅವಶ್ಯ ವಿದೆ. ಹವಾಮಾನ ಇಲಾಖೆಯ ವರ್ತಮಾನದ ಪ್ರಕಾರದ 8-10 ದಿನಗಳ ಕಾಲ ಮಳೆ ಅಭಾವ ಪರಿಸ್ಥಿತಿ ಮುಂದುವರೆಯಲಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿ, ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿ ಬಂದಲ್ಲಿ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಈಗಾಗಲೇ ಕ್ರಿಯಾಯೋಜನೆ  ಸಿದ್ಧಪಡಿಸಿಕೊಳ್ಳಬೇಕು. ಮೇವಿನ ಸಂಗ್ರಹಕ್ಕೆ ಆದ್ಯತೆ ಕೊಡಬೇಕು.

ಗೋ ಶಾಲೆಗಳನ್ನು ಪ್ರಾರಂಭಿಸುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ಸೂಕ್ತ ವ್ಯವಸ್ಥೆಯನ್ನು ಮುಂಚಿತ ವಾಗಿಯೇ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.  ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳಿಗೆ ವಿವರ ನೀಡಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲೆಯ 7 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.

ಮಳೆಯ ಅಭಾವದಿಂದ 75 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 30 ಗೋಶಾಲೆಗಳನ್ನು ಪ್ರಾರಂಭಿಸ ಲಾಗಿದ್ದು, 29,000 ಕ್ಕೂ ಹೆಚ್ಚು ಜಾನುವಾರು ಗಳು ಇಲ್ಲಿ ಆಶ್ರಯ ಪಡೆದಿವೆ. ಅಥಣಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಗೋ ಶಾಲೆ ಪ್ರಾರಂಭಿಸುವಂತೆ ಬೇಡಿಕೆ ಬಂದಿದೆ ಎಂದರು.

ಬರ ಪರಿಸ್ಥಿತಿ ಕಾಮಗಾರಿಗಳಿಗಾಗಿ ಸಿಆರ್‌ಎಫ್‌ದಿಂದ ಈವರೆಗೆ 14 ಕೋಟಿ ರೂ. ಹಾಗೂ ಜಿಲ್ಲಾ ಪಂಚಾಯತ್‌ದಿಂದ 8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮಳೆಯ ಅಭಾವವಾದರೆ ಇನ್ನೂ 46 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಬರಬಹುದಾಗಿದೆ. ಮೇವಿನ ದಾಸ್ತಾನು ಮುಗಿ ಯುತ್ತಾ ಬಂದಿದ್ದು, ಜಾನುವಾರುಗಳಿಗೆ ಹಿಂಡಿ ಮತ್ತು ಕ್ಯಾಟಲ್ ಫುಡ್ ನೀಡುವ ಬಗ್ಗೆ ಬೇಡಿಕೆ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಉದ್ಯೋಗ ಖಾತರಿ ಯೋಜನೆ ಕುರಿತು ಮುಖ್ಯಮಂತ್ರಿಗಳಿಗೆ ವಿವರ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಶಂಕರ, 255 ಕೋಟಿ ರೂ. ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ 43 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದರಲ್ಲಿ 70 ಲಕ್ಷ ರೂ. ಖರ್ಚಾಗಿದೆ. ಜಿಲ್ಲೆಯ 18 ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಕ್ರಿಮಿನಲ್ ಕೇಸ್‌ಗಳನ್ನು ಸಹ ದಾಖಲಿಸಲಾಗಿದೆ. ಇದರಿಂದ ಈ ಯೋಜನೆಯ ಅನುಷ್ಠಾನದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೊಳವೆ ಭಾವಿಗಳನ್ನು ಕೊರೆಯಲು ಅನುಮತಿ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದ 15 ದಿನಗಳ ಒಳಗಾಗಿ ಹಣ ಪಾವತಿಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ತಪ್ಪಿತಸ್ಥ ಗ್ರಾ.ಪಂ.ಗಳ ವಿರುದ್ಧ ಕ್ರಮ: ಮುಖ್ಯಮಂತ್ರಿ ಶೆಟ್ಟರ
ವಿಡಿಯೋ ಕಾನ್ಫ್‌ರೆನ್ಸ್‌ನಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಬೆಳಗಾವಿ ಜಿಲ್ಲೆ ಯಲ್ಲಿ 485 ಗ್ರಾಮ ಪಂಚಾಯತ್‌ಗಳಿವೆ. ಇದರಲ್ಲಿ 18 ಗ್ರಾಪಂಗಳಲ್ಲಿ ಮಾತ್ರ ಅವ್ಯವಹಾರ ನಡೆದ ದೂರುಗಳು ಬಂದಿವೆ. ಕಾರಣ ಈ 18 ಗ್ರಾಪಂಗಳ ಸಲುವಾಗಿ ಉಳಿದ 478 ಗ್ರಾಪಂಗಳಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಯಾಗದಂತೆ ಹಣ ಬಿಡುಗಡೆ ಮಾಡಬೇಕು. ಕೆಲಸವಾದ ಕಾಮಗಾರಿಗಳಿಗೆ ಹಣ ಪಾವತಿಸ ಬೇಕು. ತಪ್ಪಿತಸ್ಥ 18 ಗ್ರಾಪಂಗಳ ವಿರುದ್ಧ ಸೂಕ್ತ ಕಾನೂನಿನ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT