ADVERTISEMENT

ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ

ಗುಜರಾತ್‌ ಸಂಸದ ಚಂದ್ರಕಾಂತ ಪಾಟೀಲ ಕಾರ್ಯಕರ್ತರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 7:19 IST
Last Updated 21 ಮಾರ್ಚ್ 2018, 7:19 IST

ಮೂಡಲಗಿ: ‘ರಾಜ್ಯ ಸರ್ಕಾರದ ವೈಫಲ್ಯ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕು’ ಎಂದು ಗುಜರಾತ್‌ನ ಹಿರಿಯ ಸಂಸದ ಚಂದ್ರಕಾಂತ ಪಾಟೀಲ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅರಭಾವಿ ಬಿಜೆಪಿ ಮಂಡಲ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು’ ಎಂದರು.

‘ಚುನಾವಣೆಯಲ್ಲಿ ಹಗಲಿರುಳು ಪರಿಶ್ರಮವಹಿಸಿ ಎದುರಾಳಿ ಅಭ್ಯರ್ಥಿಯ ಠೇವಣಿ ಜಪ್ತಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದಲ್ಲಿಯೇ ದಾಖಲೆ ಮತಗಳಿಂದ ಜಯಶಾಲಿಯಾಗುವಂತೆ ನೋಡಕೊಳ್ಳುತ್ತಿರಿ ಎನ್ನುವ ವಿಶ್ವಾಸ ನನಗಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರದ ನಿರ್ಗತಿಕರ ಕುಟುಂಬಗಳಿಗಾಗಿ ಉಜ್ವಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುತಿದ್ದು, ಇಂತಹ ಸೌಲಭ್ಯಗಳು ಬಡಜನರಿಗೆ ತಲುಪುವಂತೆ ಮಾಡಬೇಕು. ಫಲಾನುಭವಿಗಳಿಂದ ಹಣ ಪಡೆಯುವವರ ಬಗ್ಗೆ ದೂರು ಸಲ್ಲಿಸಿ’ ಎಂದು ಅವರು ಹೇಳಿದರು.

‘ಬಿಜೆಪಿ ಮತಗಟ್ಟೆ ಪ್ರಮುಖರು ಮತ್ತು ಶಕ್ತಿ ಕೇಂದ್ರಗಳ ಪ್ರಮುಖರು ಜನರ ಮನವೊಲಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಸಮಾಜದ ವಿವಿಧ ಕ್ಷೇತ್ರದ ಜನರನ್ನು ಸಂರ್ಪರ್ಕಿಸಿ ಬಿಜೆಪಿ ಗೆಲುವಿಗೆ ಶಕ್ತಿಮೀರಿ ಕಾರ್ಯ ಮಾಡಬೇಕು. ಪ್ರತಿ ಮತಗಟ್ಟೆಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳನ್ನು ಹಾಕಿಸುವ ಮತಗಟ್ಟೆ ಪ್ರಮುಖರಿಗೆ ಪಕ್ಷದಿಂದ ನಗದು ರೂಪದ ಬಹುಮಾನ ನೀಡಲಾಗುವುದು’ ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ ‘ಪ್ರಧಾನಿ ಮೋದಿ ಅವರು 8 ಕೋಟಿ ಜನರ ಮನೆಗಳಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಉದ್ಯೋಗ ಸೃಷ್ಟಿಸಲು ಮುದ್ರಾ ಯೋಜನೆ ಜಾರಿಗೊಳಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಮೋದಿ ಅವರ ಕೈಬಲಪಡಿಸಲು ಈ ಬಾರಿಯೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳಿಂದ ಚುನಾಯಿಸಬೇಕು’ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸಿ.ಆರ್. ಮುತಾಲಿಕದೇಸಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ ಇದ್ದರು.

ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಸುಭಾಷ ಪಾಟೀಲ ಸ್ವಾಗತಿಸಿದರು, ಪ್ರಕಾಶ ಮಾದರ ನಿರೂಪಿಸಿದರು, ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದ ಕೊಪ್ಪದ ವಂದಿಸಿದರು.

‘ಬಿಜೆಪಿ ಬಿಡಲ್ಲ; ಬೇರೆ ಪಕ್ಷಕ್ಕೆ ಹೋಗಲ್ಲ’

‘ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದಲೇ ಸ್ಪರ್ಧಿಸುತ್ತಿದ್ದು, ಕಾರ್ಯಕರ್ತರು ಯಾವದೇ ಗೊಂದಲ ಮಾಡಿಕೊಳ್ಳದೆ ದಾಖಲೆ ಮತಗಳ ಅಂತರದ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸೋಣ. ಒಂದು ಲಕ್ಷ ಮತಗಳ ಅಂತರದಿಂದ ಗೆದ್ದು ತೋರಿಸೋಣ. ಬಿಜೆಪಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಲಿದ್ದು, ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲಿದ್ದು, ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.