ADVERTISEMENT

ಬಿಮಾ ಯೋಜನೆ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:40 IST
Last Updated 13 ಅಕ್ಟೋಬರ್ 2011, 9:40 IST

ಬೆಳಗಾವಿ: “ಬಡ ಫಲಾನುಭವಿಗಳಿಗೆ ಉಚಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೋಂದಣಿ ಕಾರ್ಯ ತಕ್ಷಣ ಆರಂಭಿಸಿ, ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಯತ್ನಿಸಬೇಕು” ಎಂದು ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತ ಎಸ್.ಆರ್. ಉಮಾಶಂಕರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದೊಂದಿಗೆ ಸರ್ವ ಕುಟುಂಬ ಸಮೀಕ್ಷೆ ಆಧಾರದಲ್ಲಿ ಎಲ್ಲ ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ದೊರಕಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 75ರಷ್ಟು ಹಾಗೂ ರಾಜ್ಯದಿಂದ ಶೇ. 25ರಷ್ಟು ವಿಮಾ ಕಂತಿನ ಅನುದಾನವನ್ನು ಭರಿಸಲಾಗುತ್ತದೆ. ಅರ್ಹ ಫಲಾನುಭವಿ ಕುಟುಂಬಗಳು ವಾರ್ಷಿಕವಾಗಿ 5 ಜನ ಕುಟುಂಬದ ಸದಸ್ಯರು 30 ಸಾವಿರ ರೂಪಾಯಿಗಳಲ್ಲಿ ಉಚಿತ ಆರೋಗ್ಯ ಚಿಕಿತ್ಸೆಯ ಸೌಲಭ್ಯ ಪಡೆಯಬಹುದಾಗಿದೆ” ಎಂದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಿ.ಪಿ.ಎಲ್, ನಗರ ಪ್ರದೇಶದ ಬಿ.ಪಿ.ಎಲ್, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಕಾರ್ಮಿಕರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ನೋಂದಣಿಗೊಂಡ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಅಧಿಕಾರಿಗಳು ಅರ್ಹ ಫಲಾನುಭವಿಳಲ್ಲಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಬೇಕು.

ವಿಶೇಷವಾದ ಸ್ಮಾರ್ಟ್ ಕಾರ್ಡ್ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಆಗುವಂತೆ ನೋಡಿಕೊಳ್ಳಬೇಕು” ಎಂದು ಅವರು ಅಧಿಕಾರಿಗಳಿಗೆ ಆದೇಶಿಸಿದರು.

“ಯೋಜನೆಗೆ ಸಂಬಂಧಪಟ್ಟಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕ್ಷೇತ್ರ ಮುಖ್ಯ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಾಗಾರವನ್ನು ಏರ್ಪಡಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳು ಈ ಯೋಜನೆಯ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ 2.8 ಲಕ್ಷ ಕುಟುಂಬಗಳು ಈ ಯೋಜನೆ ವ್ಯಾಪ್ತಿಗೆ ಬರುವ ಸಂಭವವಿದೆ. ಜಿಲ್ಲೆಯಲ್ಲಿ ಈಗಾಗಲೇ 41 ಆಸ್ಪತ್ರೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದ್ದು, ಇನ್ನೂ ಹೆಚ್ಚಿನ ಆಸ್ಪತ್ರೆಗಳನ್ನು ವ್ಯಾಪ್ತಿಗೆ ತರಬೇಕು” ಎಂದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಾಯ, ಸಹಕಾರ ಒದಗಿಸಲಾಗುತ್ತದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಕಾರ್ಮಿಕ ಅಧಿಕಾರಿ ಸಂತೋಷ ಹಿಪ್ಪರಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.