ADVERTISEMENT

ಬಿರುದುಗಳಿಗೆ ಜೋತು ಬೀಳದಿರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 9:10 IST
Last Updated 19 ಫೆಬ್ರುವರಿ 2011, 9:10 IST

ಬೆಳಗಾವಿ: ನಿಜವಾದ ಶಿಕ್ಷಕನಿಗೆ ಬಿರುದು ಸನ್ಮಾನಗಳ ಅವಶ್ಯಕತೆ ಇರುವುದಿಲ್ಲ. ಶಿಕ್ಷಕರು ಜ್ಞಾನದೇವಿ ಸರಸ್ವತಿಗೆ ನಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು. ಪ್ರತಿನಿತ್ಯ ಹಸನ್ಮುಖಿಯಾಗಿ ವರ್ಗಗಳಿಗೆ ಹೋಗಬೇಕು. ವರ್ಗಗಳನ್ನು ಸ್ವರ್ಗ  ಮಾಡಬೇಕು. ಶಿಕ್ಷಕರು ಸದಾ ಜ್ಞಾನದಾಹಿಗಳಾಗಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸುತ್ತ ಪಾಠ ಮಾಡಬೇಕು.ವಿದ್ಯಾರ್ಥಿಗಳು ಕಲಿತು ಮುಂದೆ ಉತ್ತಮ ನಾಗರಿಕರಾದರೆ ಅದೇ ನಮಗೆ ದೊಡ್ಡ ಸನ್ಮಾನ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಜಗಜಂಪಿ ಗುರುವಾರ ಇಲ್ಲಿ ತಿಳಿಸಿದರು.

ಅವರು ನಗರದ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷರಿಗಾಗಿ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಬೋಧನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಶಿಕ್ಷಕರು ತಮ್ಮ ಅದಾಯದಲ್ಲಿ ಶೇ 10ರಷ್ಟು ಹಣವನ್ನು ಉತ್ತಮ ಕೃತಿಗಳ ಖರೀದಿಗೆ ಮೀಸಲಿಡಬೇಕು ಎಂದು ಮನವಿ ಮಾಡಿಕೊಂಡರು. ವಿಶೇಷ ಆಮಂತ್ರಿತರಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಲಾಖೆಯ ಉಪ ನಿರ್ದೇಶಕ ವಿ.ಎಂ.ಪಾಟೀಲ, ಕನ್ನಡ ಇತರ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ. ಕರುನಾಡ ತಾಯಿಯ ಮಕ್ಕಳಾಗಿ ಹುಟ್ಟಿರುವುದು ನಮ್ಮೆಲ್ಲರ ಭಾಗ್ಯ. ಇಂತಹ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಂಡಲೀಕ ಭಾಗವಹಿಸಿದ್ದರು. ಸುಧೀರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರವಿ ಬಳೆಗಾರ ಕಮ್ಮಟದ ಉದ್ದೇಶ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಹೇಶ ಗುರನಗೌಡರ, ಡಾ. ರಾಮಕೃಷ್ಣ ಮರಾಠೆ, ಎಂ.ಎಸ್. ಇಂಚಲ ಹಾಗೂ ಶಿರೀಷ ಜೋಶಿ ಅವರು ಭಾಷಾ ಬೋಧನೆ ಬಗ್ಗೆ ಸಮಾಲೋಚನೆ ನಡೆಸಿದರು. ನಗರದ ನೂರಕ್ಕೂ ಹೆಚ್ಚು ಕನ್ನಡ ಭಾಷಾ ಶಿಕ್ಷಕರು ಕಮ್ಮಟದಲ್ಲಿ ಭಾಗವಹಿಸಿದ್ದರು. ಕಸಾಪ ಕೋಶಾಧ್ಯಕ್ಷ ಸುಭಾಷ ಏಣಗಿ, ಮುಖ್ಯಾಧ್ಯಾಪಕ ಎಂ.ಕೆ.ಮಾದಾರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.