ಬೆಳಗಾವಿ: `ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈವರೆಗೆ ಶೇ 42ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿದೆ' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಜೆ.ಪಾಟೀಲ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ಮುಂಗಾರಿನಲ್ಲಿ 3.53 ಲಕ್ಷ ಹೆಕ್ಟೇರ್ ನೀರಾವರಿ ಹಾಗೂ 3.12 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಭೂಮಿ ಸೇರಿದಂತೆ ಒಟ್ಟು 6.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಈವರೆಗೆ 2 ಲಕ್ಷ ಹೆಕ್ಟೇರ್ ಕಬ್ಬು ಸೇರಿದಂತೆ 2.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇ. 17 ರಷ್ಟು ಆಹಾರಧಾನ್ಯ ಬೆಳೆಗಳು, ಶೇ. 24 ರಷ್ಟು ಎಣ್ಣೆಕಾಳು, ಶೇ. 79 ರಷ್ಟು ವಾಣಿಜ್ಯ ಬೆಳೆಗಳು ಬಿತ್ತನೆಯಾಗಿವೆ. ನೀರಾವರಿಯಲ್ಲಿ ಶೇ. 61 ರಷ್ಟು ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಶೇ. 21ರಷ್ಟು ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಚುರುಕುಗೊಂಡಿದ್ದು, ಈ ವಾರದೊಳಗೆ ಶೇ. 55 ರಷ್ಟು ಬಿತ್ತನೆ ಆಗಬಹುದು ಎಂದರು.
ಮಳೆಯಾಶ್ರಿತ ಪ್ರದೇಶದಲ್ಲಿ, ಅಥಣಿ ತಾಲ್ಲೂಕಿನಲ್ಲಿ ಶೇ 22.4, ಬೈಲಹೊಂಗಲದಲ್ಲಿ ಶೇ 28.2, ಬೆಳಗಾವಿಯಲ್ಲಿ ಶೇ. 17.8, ಚಿಕ್ಕೋಡಿಯಲ್ಲಿ ಶೇ. 9.4, ಗೋಕಾಕನಲ್ಲಿ ಶೇ. 3.1, ಹುಕ್ಕೇರಿಯಲ್ಲಿ ಶೇ. 29.7, ಖಾನಾಪುರದಲ್ಲಿ ಶೇ. 48.5, ರಾಯಬಾಗದಲ್ಲಿ ಶೇ. 26.5, ರಾಮದುರ್ಗದಲ್ಲಿ ಶೇ. 14.5 ಹಾಗೂ ಸವದತ್ತಿ ತಾಲ್ಲೂಕಿನಲ್ಲಿ ಶೇ. 3.1 ರಷ್ಟು ಬಿತ್ತನೆ ಆಗಿದೆ ಎಂದು ಹೇಳಿದರು.
ಬಿತ್ತನೆ ಬೀಜ ಪೂರೈಕೆ: ಬಿತ್ತನೆ ಬೀಜಗಳ ಕೊರತೆ ಇಲ್ಲ. 35 ರೈತ ಸಂಪರ್ಕ ಕೇಂದ್ರಗಳು ಹಾಗೂ 79 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 49,463 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಈವರೆಗೆ 920 ಕ್ವಿಂಟಲ್ ಭತ್ತ, 70 ಕ್ವಿಂಟಲ್ ಜೋಳ, 2,400 ಕ್ವಿಂಟಲ್ ಗೋವಿನಜೋಳ, 79 ಕ್ವಿಂಟಲ್ ಸಜ್ಜೆ ಹಾಗೂ 24,074 ಕ್ವಿಂಟಲ್ ಸೋಯಾಬಿನ್ ಸೇರಿದಂತೆ ಒಟ್ಟು 27,853 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗಿದೆ. 21,609 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಸಗೊಬ್ಬರ ಕೊರತೆಯಿಲ್ಲ: ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಮುಂಗಾರು ಹಂಗಾಮಿನಲ್ಲಿ ವಿತರಣೆಗಾಗಿ ಒಟ್ಟು 2,23,940 ಮೆಟ್ರಿಕ್ ಟನ್ ರಸಗೊಬ್ಬರ ನಿಗದಿಯಾಗಿದೆ. ಜೂನ್ ತಿಂಗಳಿನ ಅಂತ್ಯದವರೆಗೆ ನಿಗದಿಯಾದ 1,05,210 ಮೆಟ್ರಿಕ್ ಟನ್ ಪೈಕಿ 30,803 ಮೆಟ್ರಿಕ್ ಟನ್ ಹಾಗೂ ಕರ್ನಾಟಕ ಸಹಕಾರಿ ಮಹಾಮಂಡಳದಲ್ಲಿ 49,646 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 80,449 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. 69,315 ಮೆಟ್ರಿಕ್ ಟನ್ ರಸಗೊಬ್ಬರ ವಿವಿಧ ಖಾಸಗಿ ಮಾರಾಟಗಾರರು ಹಾಗೂ ಸಹಕಾರಿ ಸಂಘಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ವಿಚಕ್ಷಣದಳ ರಚನೆ: ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಮೇಲೆ ನಿಗಾ ವಹಿಸಲು ಜಿಲ್ಲಾ ವಿಚಕ್ಷಣದಳ ರಚಿಸಲಾಗಿದೆ. ಬೀಜ, ರಸಗೊಬ್ಬರವನ್ನು ನಿಗದಿತ ದರದಲ್ಲಿ ಮಾತ್ರ ಮಾರಾಟ ಮಾಡಲು ಸೂಚಿಸಲಾಗಿದೆ. ವಿಚಕ್ಷಣದಳ ತಂಡದವರು ವಿವಿಧ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಿ, ಜಿಲ್ಲೆಯ ಹುಕ್ಕೇರಿಯಲ್ಲಿ 15, ಚಿಕ್ಕೋಡಿಯಲ್ಲಿ 9, ಅಥಣಿಯಲ್ಲಿ 21 ಹಾಗೂ ರಾಯಬಾಗದಲ್ಲಿ 3 ಮಂದಿ ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ 15 ಬೀಜ ಮಾರಾಟಗಾರರು, 17 ರಸಗೊಬ್ಬರ ಹಾಗೂ 16 ಕೀಟನಾಶಕ ಮಾರಾಟಗರರು ಸೇರಿದ್ದಾರೆ ಎಂದು ಪಾಟೀಲ ಹೇಳಿದರು.
ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಕಳಪೆ ಗುಣಮಟ್ಟದ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಲಾಗುವುದು. ಇಂಥವರ ಬಗ್ಗೆ ರೈತರು ಆಯಾ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ದೂರು ನೀಡಬಹುದು.
ಅಥಣಿ ತಾಲ್ಲೂಕಿನ ರೈತರು ದೂ.ಸಂಖ್ಯೆ 08289-251374, ಬೈಲಹೊಂಗಲ ರೈತರು ದೂ. 08288-236685, ಬೆಳಗಾವಿ ದೂ. 0831-2466645, ಚಿಕ್ಕೋಡಿ ದೂ. 08338-272182, ಗೋಕಾಕ ದೂ. 08332-22584, ಹುಕ್ಕೇರಿ ದೂ. 08333-265333, ಖಾನಾಪುರ ದೂ. 08336-222251, ರಾಯಬಾಗ ದೂ. 08331-225301, ರಾಮದುರ್ಗ ದೂ. 08335-242881 ಹಾಗೂ ಸವದತ್ತಿ ತಾಲ್ಲೂಕಿನ ರೈತರು ದೂ. 08330-223419ಕ್ಕೆ ಸಂಪರ್ಕಿಸಿ ದೂರು ನೀಡಬೇಕು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.