ADVERTISEMENT

ಬೆಳಗಾವಿಯಲ್ಲಿ ಕ್ರಿಕೆಟ್‌ಪಂದ್ಯಾವಳಿಗಳ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:20 IST
Last Updated 7 ಫೆಬ್ರುವರಿ 2011, 10:20 IST

ಬೆಳಗಾವಿ: ಬೆಳಗಾವಿಯಲ್ಲಿ ಕ್ರಿಕೆಟ್ ಜ್ವರ ಏರ ತೊಡಗಿದೆ. ಜ್ವರ ಏರಿಕೆಗೆ ವಿಶ್ವಕಪ್‌ಗಿಂತ ಸ್ಥಳೀಯವಾಗಿ ನಡೆದಿ ರುವ ಟೂರ್ನಿಗಳೇ ಕಾರಣವಾಗಿವೆ.ನಗರದಲ್ಲಿ ಒಂದಾದ ನಂತರ ಒಂದು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಹೀಗಾಗಿ ಸ್ಥಳೀಯ ಕ್ರಿಕೆಟ್ ಆಟಗಾರರಿಗೆ ಬಿಡುವಿಲ್ಲದಾಗಿದೆ. ಆಟಗಾರರ ಜತೆಗೆ ಟೂರ್ನಿ ಆಯೋಜನೆಗೂ ಒಂದು ತರಹ ಸ್ಪರ್ಧೆ ಏರ್ಪಟ್ಟಿದೆ.

ಕೆಲವು ತಿಂಗಳುಗಳ ಹಿಂದೆ ಬಿಪಿಎಲ್, ಬಿಸಿಎಲ್ ಎಂಬ ಎರಡು ಟೂರ್ನಿಗಳು ನಡೆದಿದ್ದವು. ಕೆಲ ದಿನಗಳ ಹಿಂದೆ ಶಾಸಕ ಸಂಜಯ ಪಾಟೀಲ ಬೆಳಗಾವಿ ಗ್ರಾಮೀಣ ಪ್ರಿಮೀಯರ್ ಲೀಗ್ ಹೆಸರಿನಲ್ಲಿ ನಗರದ ಯೂನಿಯನ್ ಜಿಮ್ಖಾನಾ ಮೈದಾನದಲ್ಲಿ ಟೂರ್ನಿಯೊಂದನ್ನು ಆಯೋಜಿಸಿದ್ದರು.ಇದೀಗ ನಗರದ ಸರ್ದಾರ್ ಮೈದಾನದಲ್ಲಿ ಶಾಸಕ ಫಿರೋಜ್ ಸೇಠ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾರೆ. ಒಂದು ಲಕ್ಷ ರೂ ಮೊದಲ ಬಹುಮಾನವಾದರೆ, 50 ಸಾವಿರ ರೂ ದ್ವಿತೀಯ ಬಹುಮಾನ ಇಡಲಾಗಿದೆ.

ಟೆನಿಸ್ ಬಾಲ್ ಟೂರ್ನಿ ಇದಾಗಿದ್ದರೂ ಹೊನಲು-ಬೆಳಕಿನ ಪಂದ್ಯಗಳನ್ನು ಏರ್ಪಡಿಸಲಾಗಿದೆ. ನಿತ್ಯವೂ ಒಂದು ಪಂದ್ಯ ಹೊನಲು- ಬೆಳಕಿನದ್ದಾಗಿರುತ್ತದೆ. ಇದಕ್ಕಾಗಿ ಲಕ್ಷಂತಾರ ರೂಪಾಯಿ ಖರ್ಚು ಮಾಡಲಾಗಿದೆ.ಒಂದೆಡೆ ವಿದ್ಯಾರ್ಥಿಗಳ ಅಧ್ಯಯನಕ್ಕೆ, ಇನ್ನೊಂದೆಡೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ಇದೆ. ಸಮರ್ಪಕ ವಿದ್ಯುತ್ ಪೂರೈಕೆ ಮಾಡದ್ದನ್ನು ಖಂಡಿಸಿ ಪ್ರತಿಪಕ್ಷಗಳು ಹೋರಾಟ ಮಾಡಿವೆ. ಆದರೆ ಈಗ ಕಾಂಗ್ರೆಸ್ಸಿಗೆ ಸೇರಿದ ಫಿರೋಜ್ ಸೇಠ ಅವರು 100 ಕಿ. ವ್ಯಾಟ್‌ನಷ್ಟು ವಿದ್ಯುತ್ ಬಳಸಿ ಟೂರ್ನಾಮೆಂಟ್ ನಡೆಸುತ್ತಿದ್ದಾರೆ. ಅದಕ್ಕಾಗಿ ಹೆಸ್ಕಾಂ ಮುಂಗಡವಾಗಿ 27 ಸಾವಿರ ರೂಪಾಯಿ ಪಾವತಿಸಿದ್ದಾರೆ.

ಕಾನೂನು ಪ್ರಕಾರ ಎಲ್ಲವೂ ನಡೆದಿರಬಹುದು. ಆದರೆ ನೈತಿಕವಾಗಿ ಟೆನಿಸ್ ಬಾಲ್ ಟೂರ್ನಿಗೆ ರೈತರಿಗೆ, ವಿದ್ಯಾರ್ಥಿಗಳಿಗೆ ಬಹು ಅವಶ್ಯವಾದ ವಿದ್ಯುತ್ ಖರ್ಚು ಮಾಡಿ ಹೊನಲು- ಬೆಳಕಿನ ಪಂದ್ಯ ಏರ್ಪಡಿಸುವ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. ಹೊನಲು ಬೆಳಕಿನ ಪಂದ್ಯ ನೋಡಿ ಜನ ಪಡುತ್ತಿರುವ ಖುಷಿಯ ಮುಂದೆ ವಿದ್ಯುತ್ ಅಪವ್ಯಯ ಅಷ್ಟೊಂದು ದೊಡ್ಡ ದೇನಲ್ಲ ಎನ್ನುವುದು ಕೆಲವರ ವಾದ.

ಕ್ರಿಕೆಟ್ ಆಟವನ್ನು ನೋಡಲು ಬಿಸಿಲನ್ನು ಲೆಕ್ಕಿಸದೇ ಸಾವಿರಾರು ಜನರು ಸೇರಿರುತ್ತಾರೆ. ಸರ್ದಾರ್ ಮೈದಾನದಲ್ಲಿ ಹಾಕಿರುವ ಟೆಂಟ್, ಕಂಪೌಂಡ್ ಗೋಡೆ ಮೇಲೆ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡುತ್ತಿದ್ದಾರೆ. ಹೊನಲು-ಬೆಳಕಿನಲ್ಲಿ ನಡೆಯುವ ಕ್ರಿಕೆಟ್ ಆಟದ ಸವಿಯನ್ನೂ ಜನರು ಸವಿಯುತ್ತಿದ್ದಾರೆ.ಈ ಟೂರ್ನಿಗಳು ಮುಗಿಯುವ ವೇಳೆಗೆ ವಿಶ್ವಕಪ್ ಟೂರ್ನಿ ಆರಂಭ ಆಗಲಿದೆ. ಹೀಗಾಗಿ ಬೆಳಗಾವಿ ಆಟಗಾರರು ಹಾಗೂ ಪ್ರೇಕ್ಷಕರಲ್ಲಿ ಹೆಚ್ಚಿರುವ ಕ್ರಿಕೆಟ್ ಜ್ವರ ಹಾಗೆಯೇ ಮುಂದುವರೆಯಲಿದೆ.

ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿಯಲ್ಲಿ ತುಸು ಹೆಚ್ಚಿಗೇ ಅನ್ನಿಸುವಷ್ಟು ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸ ಲಾಗುತ್ತಿದೆ. ಈ ಸಂಘಟಕರ್ಯಾರು ಬೇರೆ ಕ್ರೀಡೆಗಳತ್ತ ಗಮನ ಹರಿಸುತ್ತಿಲ್ಲ. ಕ್ರಿಕೆಟ್ ಅಬ್ಬರದಲ್ಲಿ ಉಳಿದ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವ ಕೊರಗು ಕ್ರೀಡಾಭಿಮಾನಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.