ADVERTISEMENT

ಬೆಳಗಾವಿ: ಬಂದ್‌ಗೆ ನೀರಸ ಪ್ರತಿಕ್ರಿಯೆ

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ: ಮಾರುಕಟ್ಟೆಯಲ್ಲಿ ಎಂದಿನಂತೆ ನಡೆದ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 29 ಮೇ 2018, 6:51 IST
Last Updated 29 ಮೇ 2018, 6:51 IST
ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಶಾಸಕರಾದ ಅಭಯ ಪಾಟೀಲ ಹಾಗೂ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ ಅವರನ್ನು ಪೊಲೀಸರು ವಶಕ್ಕೆ ಪಡೆಯಲೆತ್ನಿಸಿದರು
ಬೆಳಗಾವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಶಾಸಕರಾದ ಅಭಯ ಪಾಟೀಲ ಹಾಗೂ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ ಅವರನ್ನು ಪೊಲೀಸರು ವಶಕ್ಕೆ ಪಡೆಯಲೆತ್ನಿಸಿದರು   

ಬೆಳಗಾವಿ: ರೈತರ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಲು ಬಿಜೆಪಿ ಸೋಮವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಅರ್ಧ ಗಂಟೆ ವೇಳೆ ವಾಹನಗಳ ಸಂಚಾರವನ್ನು ತಡೆಹಿಡಿದಿದ್ದು ಬಿಟ್ಟರೆ ಇನ್ನುಳಿದಂತೆ ಜನಜೀವನ ಸಾಮಾನ್ಯವಾಗಿತ್ತು.

ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಸಾಗಿತ್ತು. ಸಿಟಿ ಬಸ್‌ಗಳ ಸಂಚಾರ ಹಾಗೂ ದೂರದ ಊರುಗಳ ಬಸ್‌ ಸಂಚಾರ ಎಂದಿನಂತೆ ಸಾಗಿತ್ತು. ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರಕ್ಕೂ ಬಸ್‌ಗಳ ಸಂಚಾರ ಸಾಮಾನ್ಯವಾಗಿತ್ತು. ಶಾಲೆಗಳು ತೆರೆದಿದ್ದು, ಪಾಠ ಪ್ರವಚನ ನಡೆದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು.

ಬಿಜೆಪಿ ಪ್ರತಿಭಟನೆ: ಚುನಾವಣೆಗೆ ಮೊದಲು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ADVERTISEMENT

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ವೃತ್ತದಲ್ಲಿ ಮಾನವ ಸರಪಳಿ ಮಾಡಿದರು. ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಭಯ ಪಾಟೀಲ ಮಾತನಾಡಿ, ‘ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಹಾಗೂ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಮಾತಿನಂತೆ ನಡೆದುಕೊಳ್ಳಲಿ. ರೈತರ ಸಾಲ ತಕ್ಷಣ ಮನ್ನಾ ಮಾಡಲಿ’ ಎಂದು ಹೇಳಿದರು.

‘ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಳೆದ ಮೂರು– ನಾಲ್ಕು ವರ್ಷಗಳಿಂದ ಕೃಷಿ ಉತ್ಪನ್ನಗಳು ಅವರ ಕೈ ಹಿಡಿದಿಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರವು ಅವರ ಸಹಾಯಕ್ಕೆ ಧಾವಿಸಬೇಕು. ಸಾಲ ಮನ್ನಾ ಮಾಡುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ತಿಳಿಸಿದರು.

ರಾಜೇಂದ್ರ ಹರಕುಣಿ ಮಾತನಾಡಿ, ‘ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಬೆಳಗಾವಿ ತಾಲ್ಲೂಕಿನ ಚಂದನ ಹೊಸೂರ ಗ್ರಾಮದ ರೈತ ಸಿದ್ದಪ್ಪ ಬಸರಿಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ. ರೈತರ ಸಾಲ ಮನ್ನಾ ಮಾಡಿದ್ದರೆ ಈ ರೈತನ ಆತ್ಮಹತ್ಯೆ ತಡೆಗಟ್ಟಬಹುದಾಗಿತ್ತು. ತಕ್ಷಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ, ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ನೇಸರಗಿ ಬಳಿ ಹೆದ್ದಾರಿ ತಡೆ: ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಸುಮಾರು ಒಂದು ಗಂಟೆ ಕಾಲ ಹೆದ್ದಾರಿ ತಡೆ ನಡೆಸಿದರು. ನೂರಾರು ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದವು. ಪೊಲೀಸರು ಮಧ್ಯೆ ಪ್ರವೇಶಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಾತು ತಪ್ಪಿದ ಎಚ್‌ಡಿಕೆ: ಟೀಕೆ

ಸವದತ್ತಿ: ರಾಜ್ಯದಲ್ಲಿ ಜೆ.ಡಿ.ಎಸ್‌ ಸರ್ಕಾರ ರಚನೆಯಾದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿ, ಇದೀಗ ಯೂಟರ್ನ್‌ ಹೊಡೆಯುವ ಮೂಲಕ ಸಮಸ್ತ ರೈತ ಬಾಂಧವರಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ರಾಜ್ಯದ್ಯಂತ ಬಂದ್‌ ಕರೆ ನೀಡಿದ ಪ್ರಯುಕ್ತ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿವಿಧಾನಸೌಧ ತಲುಪಿ ಅಲ್ಲಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪಿ.ಎಲ್‌.ಡಿ ಬ್ಯಾಂಕ್‌ ಅಧ್ಯಕ್ಷ ಜಗದೀಶ ಶಿಂತ್ರಿ ಮಾತನಾಡಿದರು. ಐ.ಪಿ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎಸ್‌ ಗಂಗಲ, ಕೃಷಿ ಮಾರುಕಟ್ಟೆ ಅಧ್ಯಕ್ಷ ಪ್ರಭು ಪ್ರಭುನವರ, ಪುರಸಭೆ ಸದಸ್ಯ ರಾಜಶೇಖರ ಕಾರದಗಿ, ಸುಭಾಸ ರಜಪೂತ, ಪಂಚಪ್ಪ ಅಲಬನ್ನವರ, ರಾಜು ಕಗದಾಳ, ನಿಂಗಪ್ಪ ಮೀಶಿ, ಉಮೇಶ ಕೊರಿಕೊಪ್ಪ ಇದ್ದರು.

ಸಾಂಬ್ರಾದಲ್ಲಿ ರಸ್ತೆ ತಡೆ:

ಬಿಜೆಪಿಯ ಮುಖಂಡ ಸಂಜಯ ಪಾಟೀಲ ನೇತೃತ್ವದಲ್ಲಿ ಸಾಂಬ್ರಾದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಕೆಲಹೊತ್ತು ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ ಪಾಟೀಲ, ‘ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಭರವಸೆ ನೀಡಿದ್ದ ಕುಮಾರಸ್ವಾಮಿ ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ. ಈಗ ಕೇಳಿದರೆ ತಮಗೆ ಬಹುಮತ ಬಂದಿಲ್ಲವೆಂದು ನೆಪ ಹೇಳುತ್ತಿದ್ದಾರೆ. ರೈತರಿಗೆ ಹೆದರದೆ ಕಾಂಗ್ರೆಸ್‌ ಮುಲಾಜಿಗೆ ಬಿದ್ದಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.