ADVERTISEMENT

ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಆರು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 9:45 IST
Last Updated 17 ಫೆಬ್ರುವರಿ 2012, 9:45 IST

ಖಾನಾಪುರ: ಬೆಂಗಳೂರಿನಲ್ಲಿ ಜರುಗಿದ 14 ಮತ್ತು 17ವರ್ಷ ವಯೋಮಿತಿಯ ಅಂಗವಿಕಲ ಮಕ್ಕಳ ರಾಜ್ಯಮಟ್ಟದ  ಕ್ರೀಡಾಕೂಟದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಐದು ಮಕ್ಕಳು ಆರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗುಂಡು ಎಸೆತದಲ್ಲಿ ಬೈಲಹೊಂಗಲ ತಾಲ್ಲೂಕಿನ ಹೊಳಿಹೊಸೂರು ಪ್ರೌಢಶಾಲೆಯ ಬಸವರಾಜ ನೇಸರಗಿ ಪ್ರಥಮ, ಭಲ್ಲೆ ಎಸೆತದಲ್ಲಿ ಸಂಪಗಾವಿ ಪ್ರೌಢಶಾಲೆಯ ಶಿವನಗೌಡ ನಾಗನಗೌಡ್ರ  ಪ್ರಥಮ, ಖಾನಾಪುರ ಪಟ್ಟಣದ ಮರಾಠಾ ಮಂಡಳ ಪ್ರೌಢಶಾಲೆಯ ಮನೀಶಾ ಗುರವ ತೃತೀಯ, ಗುಂಡು ಹಾಗೂ ಭಲ್ಲೆ ಎಸೆತದಲ್ಲಿ ರಾಮದುರ್ಗ ತಾಲ್ಲೂಕಿನ ಸುರೇಬಾನದ ಮುತ್ತಣ್ಣ ಮುನವಳ್ಳಿ ದ್ವಿತೀಯ ಹಾಗೂ ಸವದತ್ತಿ ತಾಲ್ಲೂಕು ಹೂಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಭೀಮಪ್ಪ ಪತ್ರಾವಳಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ವಿಜೇತ ಕ್ರೀಡಾಪಟುಗಳಿಗೆ ಚಿನ್ನದ ಪದಕ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗಿದೆ. ತಮ್ಮ ಅಂಗವೈಕಲ್ಯವನ್ನು ಮರೆತು ಧೈರ್ಯದಿಂದ ಆಟಗಳಲ್ಲಿ ಭಾಗವಹಿಸಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜೆ.ಎಚ್ ವೀರಣ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎ ಉಮರಾಣಿ, ಖಾನಾಪುರ ಬಿಇಒ ಎಸ್.ವೈ. ಹಳಂಗಳಿ, ಬಿಆರ್‌ಸಿ ಎಸ್.ಎಂ ಮುಲ್ಲಾ, ದೈಹಿಕ ಶಿಕ್ಷಣ ಪರಿವೀಕ್ಷಕ ಜೆ.ಡಿ. ಅಸುಂಡಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ರಾಜ್ಯಮಟ್ಟದ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಿದ ತಂಡದ ಸಂಯೋಜಕ ಶಂಕರ ಕಮ್ಮೋರ, ಜೆ.ಬಿ. ತಳವಾರ, ಎಂ.ಎ. ಪಠಾಣ, ಜಾನವೇಕರ ಮತ್ತಿತರರನ್ನು ಕೂಡ ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.