ADVERTISEMENT

ಭಾರತೀಯ ಸಂಸ್ಕೃತಿ ಸಂರಕ್ಷಿಸಿ

ಸುಧಾರಾಣಿ ಅವರಿಗೆ ‘ಶಾಂಭವಿ ಶ್ರೀ ಪ್ರಶಸ್ತಿ’ ಪ್ರದಾನ: ರಂಭಾಪುರಿ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಮೇ 2018, 2:35 IST
Last Updated 25 ಮೇ 2018, 2:35 IST

ಬೈಲಹೊಂಗಲ: ’ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ, ಬೆಳೆಸಿಕೊಂಡು ಬಂದರೆ ಮಾತ್ರ ಭವಿಷ್ಯತ್ತಿನ ಪೀಳಿಗೆ ಶಾಂತಿ, ನೆಮ್ಮದಿಯಿಂದ ಬದಕಲು ಸಾಧ್ಯ’ ಎಂದು ಬಾಳೆಹೊನ್ನೂರು ರಂಭಾಪುರಿಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ದುರ್ಗಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ನಡೆದ 'ಶಾಂಭವಿಶ್ರೀ ಪ್ರಶಸ್ತಿ ಪ್ರದಾನ ಮತ್ತು ಧರ್ಮಸಭೆ' ಸಮಾರಂಭ ಉದ್ಘಾಟಿಸಿ ಮಾತನಾಡಿದರು.

’ಆಧುನಿಕತೆ, ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಪರಂಪರೆಯ ಉತ್ಕೃಷ್ಟ ಸಂಸ್ಕೃತಿಯನ್ನು ಕಲುಷಿತ ಗೊಳಿಸುವ ಕೆಲಸ ಬಹಳ ಕಡೆ ನಡೆದಿದೆ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ದೇಶಾಭಿಮಾನ ಕೆಲವರಲ್ಲಿ ಇಲ್ಲವಾಗಿದೆ. ಕ್ಷಣ ಮಾತ್ರದ ಅಧಿಕಾರದ ಬೆನ್ನು ಹತ್ತಿ ನಿಜವಾದ ಧರ್ಮ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಉಜ್ಜಯನಿಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಶಿವಾ ಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.

ದೇವಸ್ಥಾನದ ಧರ್ಮದರ್ಶಿ ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಮಾತನಾಡಿ, ’ನಾನು ಈ ಮಟ್ಟಕ್ಕೆ ಬೆಳೆಯಲು ನನಗೆ ಲಿಂಗದೀಕ್ಷೆ ನೀಡಿರುವ ಹುಕ್ಕೇರಿ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಪ್ರೇರಣೆಯೇ ಕಾರಣ. ಉಜ್ಜಯಿನಿ ಪೀಠದ ಆರಾಧ್ಯ ಗುರುಗಳು ಮತ್ತು ಎಲ್ಲ ಪರಮಪೂಜ್ಯರ ಶ್ರೀರಕ್ಷೆ ನನ್ನ ಏಳಿಗೆಗೆ ಕಾರಣಿಭೂತವಾಗಿದೆ’ ಎಂದರು.

ಕಡಕೋಳದ ಎಂ.ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದೊಡವಾಡ ಜಡಿಸಿದ್ದೇಶ್ವರ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಸ್ವಾಮೀಜಿ, ಬಾಗೋಜಿ ಕೊಪ್ಪ ಶಿವಲಿಂಗ ಸ್ವಾಮೀಜಿ, ಮುತ್ನಾಳ ಶಿವಾನಂದ ಸ್ವಾಮೀಜಿ, ಮೂಲೆಗದ್ದೆ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಹಿರಿಯ ನಟಿ ಸುಧಾರಾಣಿ ಅವರಿಗೆ ‘ಶಾಂಭವಿ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಧಾರಮಣ ಧಾರಾವಾಹಿ ನಟಿ ಶ್ವೇತಾ, ದೇವಿ ಆರಾಧಕ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ದಂಪತಿ ಅವರನ್ನು ಸತ್ಕರಿಸಲಾಯಿತು. ಶಾಂಭವಿ ಚರಣದಾಸ ಸ್ಮರಣ ಸಂಚಿಕೆ ಬಿಡುಗಡೆ ನಡೆಯಿತು.

ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.