ADVERTISEMENT

ಭಾರತ ಅತ್ಯಾಚಾರಮುಕ್ತ ದೇಶವಾಗಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:50 IST
Last Updated 8 ಫೆಬ್ರುವರಿ 2012, 8:50 IST

ನಿಪ್ಪಾಣಿ: `ನಮ್ಮ ದೇಶ ತೆರಿಗೆ ಮುಕ್ತವಲ್ಲ; ಅತ್ಯಾಚಾರ ಮುಕ್ತ ದೇಶವಾಗಬೇಕು. ಇದು ನಮ್ಮ ಆಂದೋಲನದ ಮೂಲ ಧ್ಯೇಯ.  ಈ ಪರಿವರ್ತನೆಯ ಆಂದೋಲನಕ್ಕೆ ತಾವೆಲ್ಲ ಜೊತೆಗೂಡಿ ಬನ್ನಿ~ ಎಂದು ಸಮಾಜ ಸೇವಕಿ ಮೇಧಾ ಪಾಟ್ಕರ್ ಆಹ್ವಾನ ನೀಡಿದರು.

ಸ್ಥಳೀಯ ರೋಟರಿ ಕ್ಲಬ್ ಮತ್ತು ಗಾಡಗೆಬಾಬಾ ಪಟ್ಟಣ-ಗ್ರಾಮ ಸ್ವಚ್ಛತಾ ಅಭಿಯಾನ ಇವುಗಳ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ನಿಪ್ಪಾಣಿ ಸರ್ಕಾರವಾಡೆಯ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಅವರು ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದರು.

`ನಮ್ಮ ನೈಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ನದಿ, ಸಮುದ್ರ, ಭೂಮಿ ಮತ್ತು ಲೋಹಗಳ ಗಣಿಗಳು ವ್ಯಾಪಾರಿಗಳ, ದಲ್ಲಾಳಿಗಳ ರಾಕ್ಷಸೀ ದಾಹಕ್ಕೆ ಬಲಿಯಾಗುತ್ತಿವೆ. ಈ ಸಂಪತ್ತನ್ನು ಕಾಪಾಡಿಕೊಂಡು ಬಂದ ಜನತೆಗೆ ಬಿಡಿಗಾಸಿನ ಲಾಭವಿಲ್ಲ. ಅವರನ್ನು ಅಧಿಕಾರಿಶಾಹಿ ವರ್ಗ ಸಂಪೂರ್ಣ ನಿರ್ಲಕ್ಷಿಸಿದೆ.
 
ಇಂತಹ ಬಂಡವಾಳಶಾಹಿ ಧೋರಣೆಗಳನ್ನು ವಿರೋಧಿಸಿ ಸಮಗ್ರ ಜಾಗತಿ ಮೂಡಿಸಲು ನಾವು, ನೀವು ಒಂದಾಗಿ ನಿರಂತರ ಹೋರಾಟ ನಡೆಸಬೇಕಿದೆ. ನಮ್ಮ ಸಂಕಲ್ಪ ಶಕ್ತಿಯ ಎದುರು ಯಾವುದೇ ಶಕ್ತಿಯ ದಬ್ಬಾಳಿಕೆ ನಡೆಯದು~ ಎಂದರು.

`ನರ್ಮದಾ ಬಚಾವೋ ದಿಂದ ಆರಂಭಗೊಂಡ ನಮ್ಮ ಆಂದೋಲನ ಈಗ ದೇಶ ಬಚಾವೋ ದತ್ತ ಹೋರಾಟ ಸಾಗಿದೆ. ದೇಶವೊಂದರ ಅಭಿವೃದ್ಧಿ ಚುನಾಯಿತ ಅಭ್ಯರ್ಥಿಗಳ ಮೇಲೆ, ಸರ್ಕಾರದ ಮೇಲೆ, ಅಧಿಕಾರಿಗಳ ಮೇಲೆ ಅಥವಾ ಆಡಳಿತಶಾಹಿಗಳ ಮೇಲೆ ನಿಂತಿಲ್ಲ. ಬದಲಾಗಿ ಜನತೆಯ ಪ್ರಜ್ಞೆಯ ಮತ್ತು ಕಾರ್ಯಪ್ರವತ್ತಿಯ ಮೇಲೆ ಅವಲಂಬಿತವಾಗಿದೆ.

ಈ ದೇಶದ ಅಳಿವು ಉಳಿವು ನಮ್ಮೆಲ್ಲರ ಮೇಲಿದೆ. ಭೂಮಿಯ ಹಸಿರನ್ನು ಅಳಿಸಿ ಬರೀ ಎಣ್ಣೆ, ಅನಿಲ ಮತ್ತು ಲೋಹ ತೆಗೆಯಲು ಅನುಮತಿ ನೀಡುವವರಾರು? ಇದು ಗಂಭೀರ ಪ್ರಶ್ನೆ. ಬಡತನದ ರೇಖೆಯಲ್ಲ ಶ್ರೀಮಂತ ರೇಖೆಯನ್ನು ಗುರುತಿಸಬೇಕು. ಶ್ರೀಮಂತ ರೇಖೆಯ ಮೇಲಿನ ಅನಧಿಕೃತ ಸಂಪತ್ತಿನ ಮೇಲೆ ತೆರಿಗೆ ಸಂದಾಯವಾಗಬೇಕು. ಹಾಗಾದಾಗ ಮಿಕ್ಕವರು ತೆರಿಗೆ ಮುಕ್ತರಾಗುತ್ತಾರೆ. ಇದು ಅಸಾಧ್ಯವೇನಲ್ಲ. ಇಚ್ಛಾಶಕ್ತಿ ಬೇಕಿದೆ ಅಷ್ಟೆ~ ಎಂದು ಅಭಿಪ್ರಾಯಪಟ್ಟರು.

ನನ್ನ ಊನಕ್ಕೆ ಅಳುವುದಿಲ್ಲ: ಅಂಧ ವಿದ್ಯಾರ್ಥಿ ಆರು ವರ್ಷದ ಬಾಲಕ ಚೇತನ ಮಾತನಾಡಿ, ಎರಡು ನಿಮಿಷ ಕಣ್ಣು ಮುಚ್ಚಿ ಗೋಚರಿಸುವ ಅಂಧಕಾರಕ್ಕೆ ನೀವೆಲ್ಲ ಕಣ್ಣಿದ್ದವರು ಭಯಪಡುತ್ತೀರಿ. ನಾನೋ ಜನುಮದಿಂದಲೇ ಅಂಧ. ಆದರೆ ನನಗೆ ಭಯವಿಲ್ಲ. ನಾನೆಂದೂ ನನ್ನ ಊನಕ್ಕೆ ಅಳುವುದಿಲ್ಲ. ಬೆಂಕಿಗೋ, ಮಣ್ಣಿಗೋ ಆಹುತಿಯಾಗುವ ಮುನ್ನ ನಿಮ್ಮ ದೇಹದ ಕಣ್ಣುಗಳ ದಾನ ಮಾಡಿ ಕಣ್ಣಿಲ್ಲದವರಿಗೆ ದೃಷ್ಟಿ ನೀಡಿ~ ಎಂದು ಮನವಿ ಮಾಡಿಕೊಂಡನು.
ಇದೇ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗೆ ಮೇಧಾ ಪಾಟ್ಕರ್ ಲ್ಯಾಪ್‌ಟಾಪ್ ನೀಡಿದರು.

ಆಂದೋಲನದ ಸದಸ್ಯರಾದ ಅರ್ಥ ಶಾಸ್ತ್ರಜ್ಞ ರೋಷನ್‌ಲಾಲ ಅಗರವಾಲ, ಜ್ಞಾನದೇವ ಶೇಡಿಗೆ, ಜಮೀಲ ಭಾಯಿ, ರವಿಕಿರಣ, ಓಂಮತಿ, ವೇದವತಿ, ಮತ್ತು ಎಂಬಿಎ ವಿದ್ಯಾರ್ಥಿನಿ ಮಾಧುರಿ ಅವರ ಸಹಿತ ನಗರದ ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಅಮರ ಬಾಗೇವಾಡಿ ಸ್ವಾಗತಿಸಿದರು. ಅಭಿಯಾನದ ಅಧ್ಯಕ್ಷ ವಿಜಯ ಮೈತ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ ಕುಮಾರ ಪರಿಚಯಿಸಿದರು. ರಾಜಕುಮಾರ ಸಾವಂತ ವಂದಿಸಿದರು.

ಕುರ್ಲಿಯಲ್ಲಿ ಉಪನ್ಯಾಸ: ಕುರ್ಲಿಯ ಹಾಲಸಿದ್ಧನಾಥ ಮಂದಿರದ ಆವರಣದಲ್ಲಿ ಮೇಧಾ ಪಾಟ್ಕರ್ ಮಾತನಾಡಿ, `ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಶ್ರಮಜೀವಿ-ಬುದ್ಧಿಜೀವಿ, ಶ್ರೀಮಂತ-ಬಡವ ಹಾಗೂ ಅಧಿಕಾರಶಾಹಿ-ಶ್ರೀಸಾಮಾನ್ಯ ಇವರ ನಡುವಿನ ವ್ಯತ್ಯಾಸ ಅಡಗಬೇಕು. ಅನ್ಯಾಯ, ಅತ್ಯಾಚಾರ, ಹಿಂಸೆಯ ವಿರುದ್ಧ ನಡೆಯುವ ಹೋರಾಟ ಯಾವತ್ತೂ ಅಹಿಂಸಾತ್ಮಕವಾಗಿರಬೇಕು ಅಂದರೆ ಮಾತ್ರ ಯಶಸ್ಸು. ಜಾತಿ, ಮತ,ಪಂಥ ಮರೆತು ಹೋರಾಟಕ್ಕೆ ಸನ್ನದ್ಧರಾಗಿ ಬನ್ನಿ~ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.