ADVERTISEMENT

ಮಂಗಲಸೂತ್ರ ವಿಸರ್ಜನೆಗೆ ದಿನಗಣನೆ

28ರಂದು ಯಲ್ಲಮ್ಮನಗುಡ್ಡದಲ್ಲಿ ಕಾರ್ಯಕ್ರಮ, ಸಾಗರೋಪಾದಿಯಲ್ಲಿ ಭಕ್ತವೃಂದ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:57 IST
Last Updated 27 ಡಿಸೆಂಬರ್ 2012, 9:57 IST

ಸವದತ್ತಿ: ಉತ್ತರ ಕರ್ನಾಟಕ ಪ್ರಸಿದ್ಧ ಧಾರ್ಮಿಕ ತಾಣದಲ್ಲಿ ಶುಕ್ರವಾರ ಹೊಸ್ತಿಲ ಹುಣ್ಣಿಮೆಯನ್ನು ಶ್ರಿ ರೇಣುಕಾಯಲ್ಲಮ್ಮ ದೇವಿಯ ಮಂಗಲಸೂತ್ರ ವಿಸರ್ಜನಾ ಕಾರ್ಯಕ್ರಮ ವಿಶ್ವಸ್ಥ ಮಂಡಳಿ ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಕ್ತಿ ಶ್ರದ್ಧೆಯಿಂದ ನಡೆಯಲಿದೆ.

ಕಾರ್ತವಿರ್ಯಾರ್ಜುನ ಹಾಗೂ ಜಮದಗ್ನಿ ಋಷಿಮುನಿಗಳ ನಡುವಿನ ವೈಯಕ್ತಿಕ ಪ್ರತಿಷ್ಠೆ ಜಗಳದಿಂದ ಋಷಿಗಳ ರುಂಡ ಕಡಿದಾಗ ಶ್ರಿ ದೇವಿಯು ಮೂರು ಘಳಿಗೆ ಕಾಲ ವಿಧವೆಯಾದಳು ಎಂಬುದು ಪ್ರತೀತಿ ಇದೆ. ದೇವಿಯ ಅನುಯಾಯಿಗಳು ಹಾಗೂ ಭಕ್ತರು ಈ ಹುಣ್ಣಿಮೆಯ ದಿನದಂದು ಯಲ್ಲಮ್ಮತಾಯಿ ವಿಧವೆಯಾದಳು ಎಂದು ಮುತ್ತೈದೆಯ ಸಂಕೇತಗಳಾದ ಅರಿಶಿಣ, ಕುಂಕುಮ, ಬಳೆ, ಕಾಲುಂಗರ ಹಾಗೂ ತಾಳೆಯನ್ನು ತೆಗೆಯುವ ಪರಂಪರೆ ಅನಾದಿ ಕಾಲದಿಂದಲೂ ಇಂದಿಗೂ ನಡೆದು ಬಂದಿದೆ.

ಈ ಜಾತ್ರೆ ಸಮಯದಲ್ಲಿಯೂ ರಾಜ್ಯ ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುವರು, ಶ್ರೀದೇವಿಯ ದರ್ಶನ ಪಡೆಯುವ ಮುನ್ನ ವಿವಿಧ ವಾದ್ಯ ಮೇಳಗಳೊಂದಿಗೆ ಬಂದು ಹಣ್ಣು, ಕಾಯಿ, ಕರ್ಪೂರ ಸಮರ್ಪಿಸಿ ಧನ್ಯರಾಗುವರು.

ವಿವಿಧ ವಾಹನಗಳಲ್ಲಿ, ಎತ್ತಿನ ಚಕ್ಕಡಿಗಳ ಮೂಲಕ ಬರುವ ಸಮಸ್ತ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಕಲ ಕ್ರಮಕೈಗೊಳ್ಳಲಾಗಿದ್ದು, ಕುಡಿಯುವ ನೀರು, ಬೆಳಕು, ವಸತಿ ಸೌಲಭ್ಯಗಳಿಗೆ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹ ಅಧಿಕಾರಿ ಡಿ.ಕೆ. ನಿಂಬಾಳ ತಿಳಿಸಿದ್ದಾರೆ. ಅಡಳಿತ ಮಂಡಳಿ ತಿಳಿಸಿದೆ.

ಶ್ರಿ ಕ್ಷೇತ್ರದಲ್ಲಿ ಮೂಢನಂಬಿಕೆ ಹೋಗಲಾಡಿಸುವ ವಿವಿಧ ಸಂಘಟನೆಗಳು ಪ್ರಚಾರ ಕಾರ್ಯ ಈಗಾಗಲೇ ಆರಂಭಿಸಿದ್ದು, ಕಳೆದ ಮೂರು ದಿನಗಳಿಂದ ಭಕ್ತರು ಯಲ್ಲಮ್ಮನಗುಡ್ಡಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ, ಆಗಮಿಸುವ ಭಕ್ತರಿಕೆ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗತ್ತಿದೆ.  ಭಕ್ತರನ್ನು ಹಾಗೂ ವಾಹನ ನಿಲುಗಡೆ ನಿಯಂತ್ರಿಸಲು ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ್ದಾರೆ.

ಇಲ್ಲಿ ಕೆಲವರು ಮುಗ್ಧ ಭಕ್ತರ ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅಲ್ಲಲ್ಲಿ ಅಕ್ರಮ ಸಾರಾಯಿ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಭಕ್ತರ ಆಗ್ರಹವಾಗಿದೆ. ಈಗಾಗಲೇ ಶ್ರಿಕ್ಷೇತ್ರದಲ್ಲಿ ಕೊಟ್ಯಂತರ ಹಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಮದ್ಯಪ್ರಿಯರು ಅಮಲಿನಲ್ಲಿ ಬೇಕಾಬಿಟ್ಟಿ  ವರ್ತಿಸುವುದರಿಂದ ಧಾರ್ಮಿಕ ಕಾರ್ಯಗಳಿಗೆ ಧಕ್ಕೆ ಬರಲಿದೆ ಎಂದು ಭಕ್ತರು ಮನನೊಂದು ಹೇಳುತ್ತಿದ್ದಾರೆ. ಈ ಬಾರಿಯಾದರೂ ದಂದೆಗೆ ಕಡಿವಾಣ ಬೀಳುವುದೇ ಎಂದು ಜನ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.