ADVERTISEMENT

ಮಕ್ಕಳಿಗೆ ಕಡ್ಡಾಯ ಶಿಕ್ಷಣವೇ ಮೂಲ ಉದ್ದೇಶ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:05 IST
Last Updated 6 ಜುಲೈ 2012, 9:05 IST

ರಾಯಬಾಗ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಅಲ್ಲಿನ ಜನರೊಂದಿಗೆ ಮುಖಾಮುಖಿ ಯಾಗಿ  ಕಡ್ಡಾಯ ಶಿಕ್ಷಣ ಹಾಗೂ ಮಕ್ಕಳ ಶಿಕ್ಷಣದ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವುದು, ಶಾಲೆಗೆ ಮಕ್ಕಳನ್ನು ಕಡ್ಡಾಯವಾಗಿ ಪಾಲಕರು ಕಳಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗ ಸೇರಿಸುವುದೇ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಭಜಂತ್ರಿ ಹೇಳಿದರು.

ಗುರುವಾರ ಪಟ್ಟಣದ  ಕೇಂದ್ರ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯ ಕ್ರಮ ಉದ್ಘಾಟಿಸಿದ ಅವರು, ಎಲ್ಲವನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದರ ಜೊತೆಗೆ ದಾನಿಗಳಿಂದ ಕೆಲ ಸೌಲಭ್ಯ ಗಳನ್ನು ಪಡೆದುಕೊಳ್ಳು ವಂತೆ ಸಲಹೆ ಮಾಡಿದರು.

6ರಿಂದ 14 ವಯೋಮಾನದ ಎಲ್ಲಾ ಮಕ್ಕಳು ಕಡ್ಡಾಯವಾಗಿ ಉಚಿತ ಶಿಕ್ಷಣ ಪಡೆಯುವುದಕ್ಕಾಗಿ ಶಿಕ್ಷಣದ ಹಕ್ಕನ್ನು ಜಾರಿ ಮಾಡಲಾಗಿದೆ. ಎಲ್ಲ ಮಕ್ಕಳೂ ಸರಿ ಸಮನಾದ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವ ದಿಶೆಯಲ್ಲಿ ಪಾಲಕರು, ಅಧಿಕಾರಿಗಳು, ಶಿಕ್ಷಕರು ಕ್ರಿಯಾಶೀಲರಾಗಬೇಕು ಎಂದರು.

ಎಸ್‌ಬಿಐ ರಾಯಬಾಗ ಶಾಖೆಯ ವ್ಯವಸ್ಥಾಪಕ ವಿ.ಆರ್. ಪಟವರ್ಧನ  ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಖಾಸಗಿ ಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸುವಂತೆ ತಿಳಿಸಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ 10 ಸಾವಿರ ಬೆಲೆಯ  ಅಕ್ವಾಗಾರ್ಡ್ ವಾಟರ್ ಫಿಲ್ಟರ್ ಅನ್ನು ದೇಣಿಗೆ ನೀಡಿದರು. ಅಲ್ಲದೆ ಕೇಂದ್ರ ಶಾಲೆಗೆ ಹಾಗೂ ಉರ್ದು ಮತ್ತು ಮರಾಠಿ ಶಾಲೆಗಳಿಗೆ ತಲಾ 10 ಫ್ಯಾನ್‌ಗಳನ್ನು ಸಹ ನೀಡಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್. ಡಿಗ್ರಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ಹಣ ವಿತರಿಸಲಾಯಿತು.ತಹಶೀಲ್ದಾರ ಶಿವಾನಂದ ಸಾಗರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದು ಕೋರೆ, ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿ ಗಳು, ಚಿಂತಕರು, ಪಾಲಕರು ಉಪಸ್ಥಿತರಿದ್ದರು.ಬಿ.ಆರ್.ಸಿ. ಸಮನ್ವಯ ಅಧಿಕಾರಿ ಕೆ.ಕೆ. ನಾಯ್ಕ ಸ್ವಾಗತಿಸಿದರು. ಪಿ.ಎಚ್. ಗ್ಯಾನಪ್ಪನವರ ವಂದಿಸಿದರು.

`ಶಾಲೆಗಾಗಿ ನಾವು-ನೀವು~
ಘಟಪ್ರಭಾ (ಗೋಕಾಕ): ಇಲ್ಲಿಗೆ ಸಮೀಪದ ಧುಪದಾಳ ಕೆ.ಐ.ಡಿ. ಕಾಲೊನಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಗ್ರಾಮದ ವಡ್ಡರ ಓಣಿಯಿಂದ ಪ್ರಾರಂಭಗೊಂಡ ಮಕ್ಕಳ ಪ್ರಭಾತ ಫೇರಿ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಸತ್ಯಪ್ರಕಾಶ ಮಲ್ಲಾಪೂರೆ ಜನ ಪ್ರತಿನಿಧಿಗಳ ಪರವಾಗಿ ಸಂದರ್ಶಕರಾಗಿ ಆಗಮಿಸಿ ಶಾಲಾ ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ಹಾಗೂ ಶಾಲೆಯ ಭೌತಿಕ ಸೌಲಭ್ಯಗಳನ್ನು ವೀಕ್ಷಿಸಿದರು.

ಜಿ.ಪಂ. ಸದಸ್ಯೆ ವಂದನಾ ಕತ್ತಿ ಕಾರ್ಯಕ್ರಮ ಉದ್ಘಾಟಿಸಿ, `ಶಾಲೆಗಾಗಿ ನಾವು-ನೀವು~ ಉತ್ತಮ ಕಾರ್ಯಕ್ರಮ ವಾಗಿದ್ದು ಸರ್ಕಾರದ ಎಲ್ಲ ಪ್ರಯೋಜನ ಗಳನ್ನು ಪಡೆದುಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಂತೆ ಶಿಕ್ಷಕ ವೃಂದ ಹಾಗೂ ಪಾಲಕರಲ್ಲಿ ಮನವಿ ಮಾಡಿದರು.

ಧುಪದಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎನ್.ಕೆ. ಹುಡೇದ ಮಾತನಾಡಿ, ಶಾಲೆಗಾಗಿ ನಾವು-ನೀವು ಹಾಗೂ ಮಕ್ಕಳ ಶಿಕ್ಷಣ ಹಕ್ಕು ಕಾರ್ಯಕ್ರಮ ಗಳನ್ನು ಮಕ್ಕಳಿಗೆ ಒದಗಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮತ್ತು ಪಾಲಕರ ಮೇಲಿದೆ ಎಂದರು.

ಶಾಲಾ ಮಟ್ಟದ ಶ್ವೇತ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಅಪ್ಪಾಸಾಹೇಬ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಲಕ್ಷ್ಮಣ ಗಾಡಿವಡ್ಡರ, ಪ್ರಕಾಶ ಡಾಂಗೆ, ರಾಜು ಕತ್ತಿ, ಅಭಿವೃದ್ಧಿ ಅಧಿಕಾರಿ ಜಯರಾಮ ಕಾದ್ರೋಳಿ,       ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾ.ಪಂ. ಸದಸ್ಯರು, ಪಾಲಕರು  ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.ಮುಖ್ಯಶಿಕ್ಷಕ ಎ.ವಿ. ಗಿರೆಣ್ಣವರ ಸ್ವಾಗತಿಸಿದರು. ಶಿಕ್ಷಕಿ ಸುನಿತಾ ಬೀರಣ್ಣವರ ಕಾರ್ಯಕ್ರಮ ನಿರೂಪಿಸಿದರು. ಜಿ.ಕೆ. ಕೂಗೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.