ADVERTISEMENT

ಮತದಾರರ ಪಟ್ಟಿ:ಮರಾಠಿಯಲ್ಲಿ ಕೊಡಿ

ಚುನಾವಣಾ ಆಯೋಗಕ್ಕೆ ಎಂಇಎಸ್‌ ಮುಖಂಡರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 6:02 IST
Last Updated 5 ಏಪ್ರಿಲ್ 2018, 6:02 IST
ಮತದಾರರ ಪಟ್ಟಿಯನ್ನು ಮರಾಠಿ ನೀಡುವಂತೆ ಆಗ್ರಹಿಸಿ  ಎಂಇಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಮತದಾರರ ಪಟ್ಟಿಯನ್ನು ಮರಾಠಿ ನೀಡುವಂತೆ ಆಗ್ರಹಿಸಿ ಎಂಇಎಸ್ ಮುಖಂಡರು ಪ್ರತಿಭಟನೆ ನಡೆಸಿದರು.   

ಬೆಳಗಾವಿ: ಮತದಾರರ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.‘ಮತದಾನ ಪ್ರತಿಯೊಬ್ಬ ಮತದಾರರ ಹಕ್ಕಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಚುನಾವಣಾ ಆಯೋಗವು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.ಇದಕ್ಕೆ ಪೂರಕವಾಗಿ, ಗಡಿಯಲ್ಲಿ ವಾಸಿಸುತ್ತಿರುವ ಭಾಷಾ ಅಲ್ಪಸಂಖ್ಯಾತರಾದ ನಮಗೆ ಮರಾಠಿಯಲ್ಲಿ  ಪಟ್ಟಿಯನ್ನು ಕೊಡಬೇಕು.ಅಂತೆಯೇ ದಾಖಲೆಗಳನ್ನೂ ಒದಗಿಸಬೇಕು’ ಎಂದು ಕೋರಿದರು.

‘ಆಯೋಗವು ಕನ್ನಡದಲ್ಲಿ ಮಾತ್ರವೇ ಪಟ್ಟಿ ಪ್ರಕಟಿಸಿದೆ. ಇದರಿಂದ ಮರಾಠಿ ಭಾಷಿಕರಿಗೆ ತೊಂದರೆಯಾಗಿದೆ. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪರದಾಡುವಂತಾಗಿದೆ. ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಸೇರ್ಪಡೆ ಮೊದಲಾದವುಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದು ಮತದಾನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಹಿಂದಿನ ಚುನಾವಣೆಗಳಲ್ಲಿ ಗಮನಿಸಿದಂತೆ, ನಾಮಪತ್ರ ಅರ್ಜಿ ನಮೂನೆ ಹಾಗೂ ಇತರ ಪ್ರಮುಖ ದಾಖಲೆಗಳು ಮರಾಠಿಯಲ್ಲಾಗಲೀ ಅಥವಾ ಇಂಗ್ಲಿಷ್‌ನಲ್ಲಾಗಲೀಲಭ್ಯವಾಗಿರಲಿಲ್ಲ. ಇದು, ಈ ವರ್ಷವೂ ಮುಂದುವರಿಯದಂತೆ ನೋಡಿಕೊಳ್ಳಬೇಕು. ಮರಾಠಿ ಭಾಷಿಕರೂ ಚುನಾವಣೆಯಲ್ಲಿ ಸಕ್ರಿಯ
ವಾಗಿ ಭಾಗವಹಿಸುವಂತಾಗಲು ಅನುವು ಮಾಡಿಕೊಡಬೇಕು. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ಒದಗಿಸಬೇಕು’ ಎಂದು ಒತ್ತಾಯಿಸಿದರು.‘ಗಡಿ ಭಾಗದಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವುದಕ್ಕಾಗಿ, ಕೇಂದ್ರ ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ‍ಪಂಚಾಯ್ತಿ ಸದಸ್ಯ ಸುನೀಲ್‌ ಅಸ್ಟೇಕರ, ನಗರಪಾಲಿಕೆ ಸದಸ್ಯ ಮೋಹನ್‌ ಬೆಳಗುಂದಕರ, ಎಂಇಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮಾತೃ ಝಂಗ್ರುಚೆ, ಕಾರ್ಯದರ್ಶಿ ಮನೋಜ್‌ ಪಾವಸೆ, ಕಾರ್ಯಾಧ್ಯಕ್ಷ ವೈ.ಬಿ. ಚೌಗುಲೆ, ಎಪಿಎಂಸಿ ಅಧ್ಯಕ್ಷ ಎ. ಜಾಧವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.