ADVERTISEMENT

ಮತ ವಿಭಜನೆ; ಬಿಜೆಪಿಗೆ ಲಾಭ..?

ರಾಮದುರ್ಗ ವಿಧಾನಸಭಾ ಕ್ಷೇತ್ರl ಕಾಂಗ್ರೆಸ್‌ ಮತಬುಟ್ಟಿಗೆ ಜೆಡಿಎಸ್ ಕೈ

ಶ್ರೀಕಾಂತ ಕಲ್ಲಮ್ಮನವರ
Published 6 ಮೇ 2018, 7:12 IST
Last Updated 6 ಮೇ 2018, 7:12 IST
ಮತ ವಿಭಜನೆ; ಬಿಜೆಪಿಗೆ ಲಾಭ..?
ಮತ ವಿಭಜನೆ; ಬಿಜೆಪಿಗೆ ಲಾಭ..?   

ಬೆಳಗಾವಿ: ರಾಮದುರ್ಗ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅಶೋಕ ಪಟ್ಟಣ ಹ್ಯಾಟ್ರಿಕ್‌ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಮತಬ್ಯಾಂಕ್‌ ಆಗಿರುವ ಮುಸ್ಲಿಮರ ಬುಟ್ಟಿಗೆ ಕೈ ಹಾಕಿರುವ ಜೆಡಿಎಸ್‌ನ ಎಂ.ಜಾವೇದ್‌ ಅಡ್ಡಗಾಲು ಹಾಕಿದ್ದಾರೆ. ಇದರ ಲಾಭವನ್ನು ಬಿಜೆಪಿಯ ಮಹಾದೇವಪ್ಪ ಯಾದವಾಡ ಎಷ್ಟರ ಮಟ್ಟಿಗೆ ಪಡೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಶಾಸಕ ಅಶೋಕ ಪಟ್ಟಣ ಅವರು 2008 ಹಾಗೂ 2013ರಲ್ಲಿ ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. ಜಿಲ್ಲಾ ಮಟ್ಟದ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅವರು, ಬೆಂಗಳೂರಿನಲ್ಲಿ ಕೆಪಿಸಿಸಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಕೊಂಚ ಕಾಡುತ್ತಿದೆ.

ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಸ್ಥಳೀಯರು ನಾಲ್ಕು ಒಳ್ಳೆಯ ಮಾತುಗಳನ್ನಾಡುತ್ತಾರೆ. ಎಲ್ಲೆಡೆ ಉತ್ತಮ ರಸ್ತೆ ಮಾಡಿಸಿದ್ದಾರೆ. ಮಲಪ್ರಭಾ ನೀರು ಹರಿಸಿದ್ದಾರೆ. ಏತ ನೀರಾವರಿಗೆ ಒತ್ತು ನೀಡಿದ್ದಾರೆ ಎಂದು ಜನರು ಹೆಸರಿಸುತ್ತಾರೆ. ಆದರೆ, ವೈಯಕ್ತಿಕವಾಗಿ ಕಾರ್ಯಕರ್ತರ ಜೊತೆ ನಂಟು ಬೆಳೆಸಿಕೊಂಡಿಲ್ಲ. ಸಾರ್ವಜನಿಕರನ್ನು ನೇರವಾಗಿ ಭೇಟಿಯಾಗುವುದಿಲ್ಲ. ಅವರ ಹಿಂಬಾಲಕರ ಮೂಲಕವೇ ಭೇಟಿಯಾಗಬೇಕಾದ ಸ್ಥಿತಿ ಇದೆ. ಇದು ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ADVERTISEMENT

ಇನ್ನೊಂದೆಡೆ, ಇವರಿಗೆ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಮಹಾದೇವಪ್ಪ ಯಾದವಾಡ ಅವರ ಸರಳತೆ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತವೆ. 2004ರಲ್ಲಿ ಶಾಸಕರಾಗಿದ್ದ ಅವಧಿಯನ್ನು ಸ್ಮರಿಸುತ್ತಾರೆ. ಕಳೆದ ಎರಡು ಸಲ ಸೋಲುಂಡಿರುವ ಅವರ ಬಗ್ಗೆ ಅನುಕಂಪದ ಅಲೆ ಇದೆ.

2008ರ ಸಮಯದಲ್ಲಿ ಪಕ್ಷ ತೊರೆದು ಹೋಗಿದ್ದ ಮುಖಂಡರನ್ನು ಯಾದವಾಡ ಅವರು ಮರಳಿ ಪಕ್ಷಕ್ಕೆ ಕರೆತಂದಿದ್ದಾರೆ.

ಇದು ಅವರಿಗೆ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಶಾಸಕರು ಒಂದು ಕೋಮಿನವರಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಇದು ಕೂಡ ಬಿಜೆಪಿಗೆ ಸಹಕಾರಿಯಾಗಬಹುದು ಎಂಬ ನಿರೀಕ್ಷೆ ಇದೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಮೇಶ ಪಂಚಕಟ್ಟಿಮಠ ಪಕ್ಷೇರರಾಗಿ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಇವರ ಸಹೋದರ ಸಂಗಯ್ಯ ಪಂಚಕಟ್ಟಿಮಠ ಅವರು ಕೆಜೆಪಿಯಿಂದ ಸ್ಪರ್ಧಿಸಿದ್ದರು. ಸುಮಾರು 15,000 ಮತಗಳನ್ನು ಪಡೆದಿದ್ದರು. ಇದು ಬಿಜೆಪಿ ಅಭ್ಯರ್ಥಿಯ ಸೋಲಿಗೆ ಪರೋಕ್ಷವಾಗಿ ಕಾರಣವಾಗಿತ್ತು. ಈ ಸಲ ಪಂಚಕಟ್ಟಿಮಠ ಸಹೋದರರ ಪ್ರಭಾವ ಎಷ್ಟರ ಮಟ್ಟಿಗೆ ಬಿಜೆಪಿ ಅಭ್ಯರ್ಥಿಯ ಮೇಲೆ ಬೀರಲಿದೆ ಎನ್ನುವುದನ್ನು ನೋಡಬೇಕಾಗಿದೆ.

ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಎಂ.ಜಾವೇದ್‌ ಅವರು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಹಾಗೂ ಮುಸ್ಲಿಮರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಬೆರಗು ಮೂಡಿಸುತ್ತದೆ. ಪ್ರತಿಯೊಬ್ಬರಿಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರ್ಥಿಕ ಸಹಾಯ ಮಾಡುತ್ತಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿವೆ.

ಜಾವೇದ್‌ ಅವರ ಜನಪ್ರಿಯತೆ ಕಾಂಗ್ರೆಸ್‌ನ ಅಶೋಕ ಪಟ್ಟಣ ಅವರಿಗೆ ಹಿನ್ನಡೆ ಉಂಟಾಗಬಹುದು. ಮುಸ್ಲಿಮರ ಮತಗಳನ್ನೇ ಕಾಂಗ್ರೆಸ್‌ ಹೆಚ್ಚಾಗಿ ನೆಚ್ಚಿಕೊಂಡಿದ್ದರೆ, ಇದೇ ಮತಗಳ ಮೇಲೆ ಜಾವೇದ್‌ ಕಣ್ಣಿಟ್ಟಿದ್ದಾರೆ. ಇವರಿಬ್ಬರ ನಡುವೆ ಮತಗಳ ವಿಭಜನೆಯಾದರೆ ಬಿಜೆಪಿಗೆ ಲಾಭವಾಗಬಹುದು ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್‌– ಬಿಜೆಪಿ ನೇರ ಹಣಾಹಣಿ ಇದ್ದರೂ ಜೆಡಿಎಸ್‌ ಮಹತ್ವದ ಪಾತ್ರ ವಹಿಸಲಿದೆ.

ಕಣದಲ್ಲಿ ಉಳಿದವರು

ಅಶೋಕ ಪಟ್ಟಣ (ಕಾಂಗ್ರೆಸ್‌), ಮಹಾದೇವಪ್ಪ ಯಾದವಾಡ (ಬಿಜೆಪಿ), ಎಂ.ಜಾವೇದ್‌ (ಜೆಡಿಎಸ್‌), ಜಿ.ಎಂ. ಜೈನೇಖಾನ (ಸಿಪಿಐ–ಎಂ), ಸಿದ್ಧಪ್ಪ ಮರಿತಮ್ಮಪ್ಪ ಅಂಗಡಿ (ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ), ಸುಭಾಸಚಂದ್ರ ಅಶೋಕ ಘೋಡಕೆ (ಎಂಇಪಿ), ಗದಿಗೆಪ್ಪ ರಾಯಪ್ಪ ಬೇಲೂರ, ಭಾರತಿ ಸಂಗಮೇಶ ಚಿಕ್ಕನರಗುಂದ, ಮಾನಿಂಗಪ್ಪ ಫಕೀರಪ್ಪ ಲಕ್ಕನ್ನವರ, ಮುಕಪ್ಪ ಬಸಪ್ಪ ಮುತ್ತಾರಿ, ರಮೇಶ ಚಂದ್ರಯ್ಯ ಪಂಚಕಟ್ಟಿಮಠ, ಸುಧೀರ ಫಕೀರಪ್ಪ ಸಿದ್ದನಕೊಳ್ಳ (ಪಕ್ಷೇತರ).

ಮತದಾರರ ಸಂಖ್ಯೆ:

ಪುರುಷರು 1,00,607
ಮಹಿಳೆಯರು 96,613
ಒಟ್ಟು 1,97,220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.