ADVERTISEMENT

ಮಲ್ಲಾಪುರ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 7:35 IST
Last Updated 22 ಮಾರ್ಚ್ 2011, 7:35 IST

ಬೆಳಗಾವಿ: ಗೋಕಾಕ ತಾಲ್ಲೂಕಿನ ಮುಸಲ್ಮಾರಿ- ಮಲ್ಲಾಪುರ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ ಆ ಭಾಗದ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಗ್ರಾಮದಲ್ಲಿ  ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಈ ಹಿಂದೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಹೋರಾಟಗಳೂ ನಡೆದಿವೆ. ಆದರೆ  20 ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. ನಾಲ್ಕು ವರ್ಷಗಳ ಹಿಂದೆ ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆಯಡಿ ಈ ಗ್ರಾಮದ ಒಟ್ಟು 16 ಹಳ್ಳಿಗಳಿಗೆ ನೀರು ಪೂರೈಸುವ ನಾಲ್ಕು ಕೋಟಿ ರೂಪಾಯಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು.

ಆದರೆ ಯೋಜನೆ ವಿಫಲಗೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಅರ್ಧಕ್ಕೆ ನಿಂತಿದೆ. ಬೋರ್‌ವೆಲ್‌ನಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದರಿಂದ ಪ್ರಯೋಜನವಾಗುತ್ತಿಲ್ಲ.  ಸುಮಾರು 3 ಸಾವಿರ ಜನಸಂಖ್ಯೆಯ ಗ್ರಾಮಕ್ಕೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ ಎಂದು ಅವರು ಆರೋಪಿಸಿದರು.

ಹಿಡಕಲ್ ಜಲಾಶಯದಿಂದ  ಪೈಪ್ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲವೇ ಮಾರ್ಕಾಂಡೇಯ ನದಿಯ ಮೂಲಕ ನೀರು ಸರಬರಾಜಿಗೆ ಕ್ರಮ ತೆಗೆದುಕೊಳ್ಳಬೇಕು. ಒಟ್ಟಾರೆ ಗ್ರಾಮದ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು. ಧರಣಿಯ ನೇತೃತ್ವವನ್ನು ಫಕೀರಪ್ಪ ಮಂಗಟ್ಟಿ, ಕಸ್ತೂರಿ ಗೌಡಪ್ಪಗೋಳ, ಮಹಾದೇವಿ ಪಾಟೀಲ, ಪ್ರಭಾವತಿ ಪಾಟೀಲ, ಅಡಿವೆಪ್ಪ ಪಾಟೀಲ, ರಾಮನಗೌಡ ಪಾಟೀಲ, ಉಮೇಶ ನಿರ್ವಾಣಿ ಮತ್ತಿತರರು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.