ರಾಮದುರ್ಗ: ಮಳೆಗಾಗಿ ಪ್ರಾರ್ಥಿಸಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಮಾಠಾಧೀಶರ ಸಾನ್ನಿಧ್ಯದಲ್ಲಿ ಭಕ್ತರು ಪಟ್ಟಣದ ಮಳೆರಾಜ ಮಠದಿಂದ ಗೊಡಚಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಿದರು.
ಮಳೆರಾಜ ಮಠದ ಅಪ್ಪಯ್ಯ ಸ್ವಾಮೀಜಿ, ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಢವಳೇಶ್ವರದ ಶಿವಯೋಗಿ ಸ್ವಾಮೀಜಿ, ತೊರಗಲ್ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಮೀಜಿ, ಬನ್ನೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ನಾಗಭೂಷಣ ಸ್ವಾಮೀಜಿ ಭಾಗವಹಿಸಿದ್ದರು.
ಪಾದಯಾತ್ರೆಯುದ್ದಕ್ಕೂ ಕರಡಿ ಮಜಲು, ಡೊಳ್ಳಿನ ಮಜಲು ಹಾಗೂ ಭಜನಾ ತಂಡಗಳು ಮಂಗಲವಾದ್ಯ ನುಡಿಸುತ್ತ ಶ್ರೀಕ್ಷೇತ್ರ ಗೊಡಚಿ ತಲುಪಿದರು.
ಗೊಡಚಿ ವೀರಭದ್ರೇಶ್ವರ ಕ್ಷೇತ್ರದಲ್ಲಿ ಪೂಜೆಯ ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ತಾಲ್ಲೂಕಿನಲ್ಲಿ ಭೀಕರ ಬರಗಾಲ ಇದೆ. ಮಳೆರಾಯನ ಕೃಪೆಯಾಗದ ಕಾರಣ ಕುಡಿಯವ ನೀರಿಗಾಗಿ ಹಾಹಾಕಾರ ಎದ್ದಿದೆ. ಮಳೆರಾಯ ಕೃಪೆ ತೋರಬೇಕಿದೆ ಪ್ರಾರ್ಥಿಸಿದರು.
ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಗಂಗಪ್ಪ ಬೂದಿ, ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ಮಹಾದೇವಿ ರೊಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಜಿ. ಜಿ. ಪಾಟೀಲ, ಶಂಕರ ಲಮಾಣಿ, ಡಿಸಿಸಿ ಬ್ಯಾಂಕ ನಿರ್ದೇಶಕ ಎಸ್. ಎಸ್.ಢವಣ, ಬಿಜೆಪಿ ಮುಖಂಡರಾದ ಶಿವಪ್ಪ ಮೇಟಿ, ಮಲ್ಲಣ್ಣ ಯಾದವಾಡ, ಬಿ. ಎಫ್. ಬಸಿಡೋಣಿ ಭಾಗವಹಿಸಿದ್ದರು.
ನೇತ್ರ ಉಚಿತ ಚಿಕಿತ್ಸೆ: ಲಯನ್ಸ್ ಸಂಸ್ಥೆ ಹಾಗೂ ತಾಲ್ಲೂಕು ಸಮುದಾಯ ಆಸ್ಪತ್ರೆಯ ಆಶ್ರಯದಲ್ಲಿ ರಾಮದುರ್ಗದಲ್ಲಿ ಈಚೆಗೆ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಜರುಗಿತು.
ಶಿಬಿರದಲ್ಲಿ ಒಟ್ಟು 848 ಜನರ ಕಣ್ಣಿನ ತಪಾಸಣೆ ಮಾಡಲಾಗಿದೆ. ಅದರಲ್ಲಿ 312 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಲಯನ್ಸ್ ಅಧ್ಯಕ್ಷ ವೈ.ಬಿ. ಕಕರಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.