ADVERTISEMENT

ಮಳೆ ಆರಂಭವಾದರೂ ತಪ್ಪದ ನೀರಿನ ಬವಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:22 IST
Last Updated 22 ಜೂನ್ 2013, 11:22 IST

ಚಿಕ್ಕೋಡಿ: ಮುಂಗಾರು ಆರಂಭಗೊಂಡರೂ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆಯಿಂದ ಜನ ಮುಕ್ತರಾಗಿಲ್ಲ. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸರಬರಾಜು ಯೋಜನೆಗಾಗಿ ಕೋಟ್ಯಂತರ ರೂಪಾಯಿ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗಿದೆ.

ಆದರೆ, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ತಾಲ್ಲೂಕಿನ ಕೇರೂರ ಮತ್ತು ಕಾಡಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ.

ಕೇರೂರ ಮತ್ತು ಕಾಡಾಪುರ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ 2003-04 ನೇ ಸಾಲಿನಲ್ಲಿ ರಾಜೀವ್ ಗಾಂಧಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಅಂದಾಜು ರೂ 2.80 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು  ಸುಮಾರು 9 ವರ್ಷ ಕಳೆದರೂ ಸಾರ್ವಜನಿಕರಿಗೆ ಈ ಯೋಜನೆಯ ಲಾಭ ದೊರೆತಿಲ್ಲ.

ಕೃಷ್ಣಾ ನದಿಯಿಂದ ಕೊಳವೆ ಮಾರ್ಗದ ಮೂಲಕ ಕಾಡಾಪುರ ಗ್ರಾಮದಲ್ಲಿ ನಿರ್ಮಿಸಿರುವ ಪಂಪ್‌ಹೌಸ್ ಹಾಗೂ ಜಲಸಂಗ್ರಹಾಲಯಗಳಿಗೆ ನೀರು ಶೇಖರಣೆ ಮಾಡಿ ಅಲ್ಲಿಂದ ಕೇರೂರ ಮತ್ತು ಕಾಡಾಪುರ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಈ ಯೋಜನೆಯ ಕಾಮಗಾರಿಯನ್ನು ಇಚಲಕರಂಜಿ ಮೂಲದ ಓಂ ಕನ್‌ಸ್ಟ್ರಕ್ಷನ್ ಕಂಪೆನಿ ನಿರ್ವಹಿಸಿದೆ.

`ಕೃಷ್ಣಾ ನದಿಯಿಂದ ಕಾಡಾಪುರವರೆಗೆ ಅಳವಡಿಸಲಾಗಿರುವ ಪೈಪ್‌ಲೈನ್ ಅವೈಜ್ಞಾನಿಕವಾಗಿದ್ದು, ನೀರು ಸರಬರಾಜು ಆಗುವಾಗ ಪೈಪ್‌ಗಳು ಒಡೆಯುತ್ತಿವೆ ಇದರಿಂದ ನೀರು ಸೋರಿಕೆಯಾಗಿ ಗ್ರಾಮಕ್ಕೆ ತಲುಪುತ್ತಿಲ್ಲ' ಎಂದು ಗ್ರಾ.ಪಂ. ಸದಸ್ಯ ಮಾರುತಿ ವಾಘಮೋರೆ ಹೇಳುತ್ತಾರೆ.

ಕಾಡಾಪುರ ಗ್ರಾಮದಲ್ಲಿ ಯೋಜನೆಯಡಿ ನಿರ್ಮಿಸಲಾಗಿರುವ ಪಂಪ್‌ಹೌಸ್, ಸ್ಲೋ ಶ್ಯಾಂಡ್ ಪಿಲ್ಟರ್ ಹಾಗೂ 5 ಸಾವಿರ ಲೀಟರ್ ಸಾಮರ್ಥ್ಯದ ಜಲಸಂಗ್ರಹಾಲಯ ಇರುವ ಸ್ಥಳ ಇಂದು ಪಾಳು ಬ್ದ್ದಿದಿದ್ದು, ಬಯಲು ಶೌಚಾಲಯವಾಗಿ ಮಾರ್ಪಾಟಾಗಿದೆ.
ಯೋಜನೆ ಅನುಷ್ಠಾನಕ್ಕಾಗಿ ಮಂಜೂರಾದ ಅಂದಾಜು ಮೊತ್ತ ರೂ 2.80 ಕೋಟಿಗಳ ಪೈಕಿ ಶೇ 80 ರಷ್ಟು ಹಣವನ್ನು ಗುತ್ತಿಗೆದಾರರು ಪಡೆದಿದ್ದಾರೆ. ಮತ್ತೆ ಈ ಯೋಜನೆ ಪುನರುಜ್ಜೀವನಕ್ಕೆ  ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹೊಸ ಪ್ರಸ್ತಾವ ಸಲ್ಲಿಸಿದೆ ಎನ್ನಲಾಗುತ್ತಿದೆ.

ಯೋಜನೆ ವೈಫಲ್ಯದಿಂದ ಸರ್ಕಾರದ ಕೋಟ್ಯಂತರ ರೂಪಾಯಿ ದುಡ್ಡು ನಿಷ್ಪ್ರಯೋಜನಕವಾಗಿದೆ. ಇದೀಗ ಮತ್ತೆ ಅದರ ಪುನರುಜ್ಜೀವನಕ್ಕೆ ಕೋಟ್ಯಂತರ ಹಣ ಖರ್ಚು ಮಾಡಬೇಕು. ಮೊದಲೇ ಈ ಬಗ್ಗೆ ಅಧಿಕಾರಿಗಳು ಏಕೆ ಗಮನಹರಿಸಲಿಲ್ಲ?  ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಪಂಚನದಿಗಳು ಪ್ರವಹಿಸುವ ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ಕುಸಿಯುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕೋಟ್ಯಂತರ ರೂಪಾಯಿ ಹಣ ವ್ಯಯಿಸಲಾಗುತ್ತಿದೆ. ಇದಕ್ಕೆ ಬದಲಾಗಿ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಆಡಳಿತ ವರ್ಗ ಗಮನ ಹರಿಸಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.