ADVERTISEMENT

`ಮಹಿಳೆ, ಮಕ್ಕಳ ಸಾಹಿತ್ಯ ವಿಪುಲ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 5:53 IST
Last Updated 24 ಜೂನ್ 2013, 5:53 IST

ನಿಪ್ಪಾಣಿ: `ಸಂವೇದನಾಶೀಲ ಸಾಹಿತ್ಯ ರಚನೆಯು  ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯ' ಎಂದು ಡಾ. ಹನುಮಾಕ್ಷಿ ಗೋಗಿ ಅವರು ಹೇಳಿದರು.

ನಿಪ್ಪಾಣಿಯಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ `ಮಹಿಳಾ ಮತ್ತು ಮಕ್ಕಳ ಸಾಹಿತ್ಯ' ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳಾ ಸಾಹಿ ತ್ಯವನ್ನು ಕೀಳಾಗಿ ಕಾಣುತ್ತಿರುವದು ವಿಷಾದದ ಸಂಗತಿಯಾಗಿದೆ ಎಂದರು.

ಮಹಿಳೆಯರು ಅನುತ್ಪಾದಕರು ಎನ್ನುವ ಧೋರಣೆಗೆ ಸಂಪೂರ್ಣವಾಗಿ ವಿರೋಧಿಸುತ್ತೇನೆ. ಮಹಿಳೆಯು ಕುಟುಂಬ ನಿರ್ವಹಣೆಯೊಂದಿಗೆ ಸಾಂಸ್ಕೃತಿಕತೆಯನ್ನು ಪ್ರತಿನಿಧಿಸುತ್ತಿರುವದು ಸಮಾಜವು ಹೆಮ್ಮೆಪಡಬೇಕು. ಮಹಿಳಾ ಸಾಹಿತಿಳನ್ನು ಗುರುತಿಸುವ ಕೆಲಸವಾಗಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಮಹಿಳಾ ಸಾಹಿತ್ಯ ಕುರಿತು ಮಾತನಾಡಿದ ಡಾ.ಕೆ.ಆರ್. ಸಿದ್ಧಗಂಗಮ್ಮ `ಬೆಳಗಾವಿ ಜಿಲ್ಲೆಯ ಮಹಿಳಾ ಸಾಹಿತ್ಯದ ಮೊದಲ ಘಟ್ಟವು ಭಾಗೀರಥಿಬಾಯಿ ಪುರಾಣಿಕರ ಅವರಿಂದ ಪ್ರಾರಂಭಗೊಂಡು ಸರಸ್ವತಿ ದೇವಿ ಗೌಡರ, ಶಾಂತಾಬಾಯಿ ಮಾಳವಾಡ, ಹುದಲಿಯ ಸುಶೀಲಾ ಕೊಪ್ಪದ, ಶಾಂತಾದೇವಿ ಕಣವಿ, ಗೀತಾ ದೇಸಾಯಿ ಅವರಿಂದ ಸಾಹಿತ್ಯ ಕೃಷಿಯು ಸಮೃದ್ಧಗೊಂಡಿದೆ. ರಾಜ್ಯ ಮಟ್ಟದಲ್ಲಿ ಮಹಿಳಾ ಲೇಖಕಿಯರ ಸಂಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಲೇಖಕಿಯರ ಪಾತ್ರವು  ಪ್ರಮುಖವಾಗಿದೆ ಎಂದರು.

80 ಕೃತಿಗಳನ್ನು ರಚಿಸಿರುವ ನೀಲಗಂಗಾ ಚರಂತಿಮಠ ಅವರು ಸೇರಿದಂತೆ ಪ್ರಸ್ತುತವಾಗಿ ಅನೇಕ ಮಹಿಳಾ ಸಾಹಿತಿಗಳು ಕಾವ್ಯ, ಕತೆ, ಕಾದಂಬರಿ, ಪ್ರವಾಸ ಸಾಹಿತ್ಯ ಹೀಗೆ ವೈವಿದ್ಯಮಯವಾದ ಸಾಹಿತ್ಯದ ರಚನೆಯು ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿರುವ ಇನ್ನು 35ಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಉತ್ಕೃಷ್ಟವಾದ ಸಾಹಿತ್ಯ ರಚನೆಯಲ್ಲಿ ತೊಡಗಿ ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದರು.

ಬೆಳಗಾವಿ ಜಲ್ಲೆಯ ಮಕ್ಕಳ ಸಾಹಿತ್ಯದ ಬಗ್ಗೆ ಮಾತನಾಡಿದ ಪ್ರೊ. ಸಂಗಮೇಶ ಗುಜಗೊಂಡ `ಕಾವ್ಯ, ಕತೆ, ಕಾದಂಬರಿ, ಪ್ರವಾಸ ಸಾಹಿತ್ಯ ಒಳಗೊಂಡಿರುವ ಮಕ್ಕಳ ಸಾಹಿತ್ಯವು ಪರಿಪೂರ್ಣವಾದ ಸಾಹಿತ್ಯ ಪ್ರಕಾರವಾ ಗಿದ್ದು, ಮಕ್ಕಳ ಸಾಹಿತ್ಯಕ್ಕೆ ಮೂಲ ಬೇರು ಜನಪದ ಸಾಹಿತ್ಯವಾಗಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಸೆಕೆಯು ಗಂಗಾಧರ ಮಡಿ ವಾಳೇಶ ತುರಮುರಿ ಅವರಿಂದ ಪ್ರಾರಂಭಗೊಂಡು. ನಂತರ ಶಾಂತವೀರ ಕಟ್ಟಿಮಠ, ಕಂಬಿ ಬಸವಾರ್ಯರು, ವೀರಪ್ಪ ನಾಗಶೆಟ್ಟಿ ಮಾಸ್ತರ, ರಾಮ ರಾವ ಕುಲಕರ್ಣಿ, ಭೀಮಾಜಿ ಹುಲಕವಿ, ಪ್ರ.ಗೋ. ಕುಲಕರ್ಣಿ, ಮ.ಪ್ರ. ಪೂಜಾರಿ, ಡಾ.ಎಸ್.ಜಿ.ನಂದಿಮಠ, ಬೆಟಗೇರಿ ಕೃಷ್ಣಶರ್ಮ, ಮಿರ್ಜಿ ಅಣ್ಣಾ ರಾಯ, ಬಸವರಾಜ ಕಟ್ಟೀಮನಿ, ಕೃಷ್ಣ ಮೂರ್ತಿ ಪುರಾಣಿಕ, ಶಂ.ಭಾ. ಜೋಶಿ ಹೀಗೆ ಮಕ್ಕಳ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ನೀಡಿರುವರು.
ಜಿಲ್ಲೆಯ ನವೋದಯದ ಶ್ರೇಷ್ಠ ಕವಿಗಳಾದ ಎಸ್.ಡಿ. ಇಂಚಲ ಹಾಗೂ ಡಾ. ಡಿ.ಎಸ್. ಕರ್ಕಿ ಅವರು ಮಕ್ಕಳ ಸಾಹಿತ್ಯ ರಚನೆಯಲ್ಲಿ ಗಮನ ನೀಡಿ ರುವದು ಇಲ್ಲಿಯ ವಿಶೇಷವಾಗಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಶಿಕ್ಷಕರು ಮಕ್ಕಳ ಸಾಹಿತ್ಯ ರಚಿಸುವ ಪರಂಪರೆ ಯಲ್ಲಿ ಉಳವೀಶ ಹುಲೆಪ್ಪನವರಮಠ ಹಾಗೂ ಗುರುಪಾದಸ್ವಾಮಿ ಹಿರೇಮಠ ರಿಂದ ಪ್ರಾರಂಭಗೊಂಡು ಚನಬಸಪ್ಪ ಹೊಸಮನಿ, ಬಿ.ಎ. ಸನದಿ ಅವರ ಮೂಲಕ  ಮುಂದುವರೆದು ಮಕ್ಕಳ ಶ್ರೇಷ್ಠ ಸಾಹಿತ್ಯ ಪರಂಪರೆಯು ಇಂದಿಗೂ ಮುಂದುವರೆದುಕೊಂಡು ಬಂದಿದೆ ಎಂದರು.

ಆಶಯ ನುಡಿ ಹೇಳಿದ ಡಾ. ಜಯಶ್ರೀ ನಾಗರಳ್ಳಿ `ಮಹಿಳೆಯ ಸಾಮಾಜಿಕ ಸಂಕೋಲೆಯ ತನ್ನ ನೋವುಗಳ  ಧ್ವನಿಯು ಸಾಹಿತ್ಯ ರೂಪ ದಲ್ಲಿ ಹೊರಹೊಮ್ಮಿತ. ಪರಿಪೂರ್ಣ ವಾದ ಮಹಿಳಾ ಸಾಹಿತ್ಯವನ್ನು ಪುರುಷ ಸಾಹಿತ್ಯದ ಸಮಾನವಾಗಿ ಗುರುತಿಸುವ ಕೆಲಸವಾಗಬೇಕು ಎಂದರು.

ಪ್ರಾರಂಭದಲ್ಲಿ ನವೀನ ಮಗದುಮ್ ಮತ್ತು ಸೌಜನ್ಯ ಇಟ್ನಾಳ ತಮ್ಮ ಸ್ವರಚಿತ ಕವನ ವಾಚಿಸುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.

ಪುಂಡಲೀಕ ಪಾಟೀಲ, ಸುನಂದಾ ಎಮ್ಮಿ, ಎಸ್.ಎಂ.ಶಿರೂರ, ದೀಪಿಕಾ, ಬಿ.ಎಸ್.ಜಗಾಪೂರ, ಎಂ.ಎಂ. ಸಂಗಣ್ಣವರ, ಪಾರ್ವತಿ ಪಿಟಗಿ, ಆರ್.ಎಸ್. ಚಾಪಗಾಂವಿ,ಶೈಲಜಾ ಮಠಪತಿ, ಗೌರಿ ಕರ್ಕಿ, ಮುರಗೇಶ ಗಾಡವಿ, ಅಕ್ಬರ ಸನದಿ, ಎಲ್.ಎಸ್. ಚೌರಿ ಅವರು ಗೋಷ್ಠಿಯ ಪ್ರತಿಕ್ರಿಯೆ ಯಲ್ಲಿ ಭಾಗವಹಿಸಿದ್ದರು. ಸರಜೂ ಕಾಟಕರ, ಶಾಸಕಿ ಶಶಿಕಲಾ ಜೊಲ್ಲೆ ವೇದಿಕೆಯಲ್ಲಿದ್ದರು. ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು, ಬಸವರಾಜ ಗಾರ್ಗಿ ನಿರೂಪಿಸಿದರು, ಕೊರಬು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.