ADVERTISEMENT

ರಮ್ಜಾನ್, ಪಂಚಮಿಗೆ ಸಕ್ಕರೆ ಸೋವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 6:07 IST
Last Updated 5 ಆಗಸ್ಟ್ 2013, 6:07 IST

ರಾಮದುರ್ಗ: ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯು ತನ್ನ ಷೇರುದಾರರಿಗೆ ನಾಗರ ಪಂಚಮಿ ಮತ್ತು ರಮ್ಜಾನ್ ಹಬ್ಬವನ್ನು ಸಿಹಿಯೊಂದಿಗೆ ಆಚರಿಸಲು ಅರ್ಧ ಬೆಲೆಯಲ್ಲಿ ಸಕ್ಕರೆ ನೀಡಲು ನಿರ್ಧರಿಸಿದೆ ಎಂದು ಕಾರ್ಖಾನೆ ಅಧ್ಯಕ್ಷ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಕಾರ್ಖಾನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 5 ರಿಂದ ಸೆ. 30ರ ತನಕ ಸಕ್ಕರೆ ವಿತರಣೆ ಮಾಡಲಾಗುವುದು. ಷೇರುದಾರರು ಬೆಳಗಿನ 9-30 ರಿಂದ ಸಂಜೆ 5-30ರ ವರೆಗೆ ಸರದಿಯಲ್ಲಿ ಸಕ್ಕರೆ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಷೇರುದಾರರ `ಅ' ಮತ್ತು `ಬ' ವರ್ಗದ ಒಬ್ಬರಿಗೆ 50 ಕೆ. ಜಿ. ಮತ್ತು `ಡ' ವರ್ಗದ ಒಬ್ಬರಿಗೆ 25 ಕೆ. ಜಿ. ಸಕ್ಕರೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಮಾರುಕಟ್ಟೆ ಅರ್ಧ ಬೆಲೆ ಅಂದರೆ ಪ್ರತಿ ಕೆ.ಜಿಗೆ ರೂ. 16ಕ್ಕೆ ಸಕ್ಕರೆ ನೀಡಲು ಯೋಜಿಸಿದೆ. ಕಾರ್ಖಾನೆಯಲ್ಲಿ ಒಟ್ಟು 19,000 `ಅ' ಮತ್ತು `ಬ' ಷೇರುದಾರರಿದ್ದಾರೆ. 392 ಜನ `ಡ' ವರ್ಗದ ಷೇರುದಾರರಿದ್ದಾರೆ. ಇವರೆಲ್ಲರಿಗೂ ಹಬ್ಬದ ಸಮಯದಲ್ಲಿ ಸಕ್ಕರೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಷೇರುದಾರರಿಗೆ ನೂತನವಾಗಿ ಗುರುತಿನ ಪತ್ರ ನೀಡಲು ಉದ್ದೇಶಿಸಿದ್ದು, ಸಕ್ಕರೆ ಪಡೆಯುವ ಸಮಯಕ್ಕೆ ಷೇರುದಾರರು ಷೇರು ಪತ್ರ ಮತ್ತು ಮೂರು ಪಾಸ್‌ಪೋರ್ಟ್ ಸೈಜಿನ ಫೋಟೊಗಳನ್ನು ನೀಡಿ ಸಕ್ಕರೆ ಪಡೆಯಲು ಅವರು ಕೋರಿದರು. ಮೃತ ಷೇರುದಾರರ ಮರು ನೋಂದಾವಣೆಗೆ ಸಂಬಂಧಿಸಿದವರು ಮತದಾರರ ಚೀಟಿ ಹಾಜರು ಮಾಡಬೇಕು ಎಂದರು.

ಕಳೆದ ವರ್ಷವೇ ಹಬ್ಬಕ್ಕೆ ಸಕ್ಕರೆ ವಿತರಿಸಲು ನಿರ್ಧರಿಸಿದ್ದರೂ ಆಡಳಿತಾತ್ಮಕ ತೊಂದರೆಯಿಂದ ಅದು ಸಾಧ್ಯವಾಗಿರಲಿಲ್ಲ. ಕಾರ್ಖಾನೆ ಆರಂಭಗೊಂಡು ಮೂರು ವರ್ಷಗಳಲ್ಲಿ ಸಾಲಮುಕ್ತ ಕಾರ್ಖಾನೆಯಾಗಿದೆ.

ಈ ವರ್ಷದ ಲಾಭಾಂದಲ್ಲಿ ಷೇರುದಾರರಿಗೆ ಸಕ್ಕರೆ ವಿತರಣೆಗೆ ಆಡಳಿತ ಮಂಡಳಿ ಮುಂದಾಗಿದೆ. ಕಾರ್ಖಾನೆ ಆರಂಭಕ್ಕೂ ಮುನ್ನ ಷೇರು ನೀಡಿದವರಿಗೆ ಇದೇ ಮೊದಲ ಬಾರಿಗೆ ಸಕ್ಕರೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಷೇರುದಾರರಿಗೆ ಎಸ್-30 ಗ್ರೇಡಿನ ಸಕ್ಕರೆಯನ್ನು ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇದೊಂದು ಸಾರಿ ಮಾತ್ರ ಕಾರ್ಖಾನೆಯ ಆವರಣದಲ್ಲಿ ಸಕ್ಕರೆ ವಿತರಣೆ ಮಾಡಿ ಮುಂದಿನ ವರ್ಷದಿಂದ ಹೋಬಳಿ ಮಟ್ಟದಲ್ಲಿ ಸಕ್ಕರೆ ವಿತರಣೆಗೆ ವ್ಯವಸ್ಥೆ ಮಾಡಿ ದೂರದ ಷೇರುದಾರರಿಗೆ ಆಗುವ ತೊಂದರೆ ನೀಗಿಸಲಾಗುವುದು ಎಂದರು.

ಸೋಮವಾರ ಜರುಗುವ  ಸಕ್ಕರೆ ವಿತರಣೆ ಸಮಾರಂಭದಲ್ಲಿ ತೊರಗಲ್ ಮಠದ ಚನ್ನಮಲ್ಲ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕಾರ್ಖಾನೆ ಉಪಾಧ್ಯಕ್ಷ ಜಿ. ಜಿ. ಪಾಟೀಲ, ಎಸ್.ಐ. ಶೆಟ್ಟರ್ ಆಡಳಿತ  ಮಂಡಳಿಯ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.