ADVERTISEMENT

ರಸ್ತೆ ಮೇಲೆ ವಿದ್ಯಾರ್ಥಿನಿಯರ ಓದು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:30 IST
Last Updated 18 ಅಕ್ಟೋಬರ್ 2012, 9:30 IST
ರಸ್ತೆ ಮೇಲೆ ವಿದ್ಯಾರ್ಥಿನಿಯರ ಓದು
ರಸ್ತೆ ಮೇಲೆ ವಿದ್ಯಾರ್ಥಿನಿಯರ ಓದು   

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಬುಧವಾರ ರಾತ್ರಿ ರಸ್ತೆ ಮೇಲೆ ಕುಳಿತು ಓದುವ ಮೂಲಕ ಪ್ರತಿಭಟಿಸಿದರು.

ವಿದ್ಯಾರ್ಥಿನಿ ನಿಲಯದಲ್ಲಿ ಮೂಲಸೌಕರ್ಯಗಳಿಲ್ಲ. ಕಳೆದ 10 ದಿನಗಳಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ವಸತಿ ನಿಲಯದಲ್ಲಿ ಕುಡಿಯುವ ನೀರು, ಊಟ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ನೂರು ಜನರ ಸಾಮರ್ಥ್ಯ ಇರುವ ಕಡೆ 200 ಜನರನ್ನು ಇಡಲಾಗುತ್ತಿದೆ. ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಕಳೆದ 10 ದಿನಗಳಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟನಾನಿರತರು ಹರಿಹಾಯ್ದರು.

ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ವಸತಿ ನಿಲಯದ ಎದುರಿಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಬಳಿಕ ರಸ್ತೆಯ ಮೇಲೆ ಕುಳಿತು ಓದುವ ಮೂಲಕ ಗಮನ ಸೆಳೆದರು.

ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಪ್ರೀತಂ ನಸಲಾಪುರೆ, ಶೀಘ್ರದಲ್ಲೇ ವಸತಿ ನಿಲಯದಲ್ಲಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಕೈಲಾಸ ಪಾಟೀಲ, ಸಹ ಕಾರ್ಯದರ್ಶಿ ಪ್ರಮೋದ ಬಳ್ಳೂರ, ಪ್ರಭುದೇವ ಓದಿಸುಮಠ, ಮಹಾನಂದ ಪಾಟೀಲ, ಸೋನಾಲಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.