ADVERTISEMENT

ರಾಷ್ಟ್ರೀಯ ಏಕತೆಗಾಗಿ ಓಟ 15ರಂದು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:13 IST
Last Updated 13 ಡಿಸೆಂಬರ್ 2013, 6:13 IST

ಬೆಳಗಾವಿ: ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪುಣ್ಯತಿಥಿ ಅಂಗವಾಗಿ ನಗರದಲ್ಲಿ ಇದೇ 15 ರಂದು ರಾಷ್ಟ್ರೀಯ ಏಕತೆಗಾಗಿ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‘ ಎಂದು ಬಿಜೆಪಿಯ ಬೆಳಗಾವಿ ವಿಭಾಗದ ಉಸ್ತುವಾರಿ ಹಾಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8ಕ್ಕೆ ಶಿವಾಜಿ ಉದ್ಯಾನದಲ್ಲಿ ಓಟಕ್ಕೆ ಚಾಲನೆ ನೀಡಲಾಗುವುದು. ಸರ್ದಾರ್‌್ಸ ಮೈದಾನದಲ್ಲಿ ಓಟ ಮುಕ್ತಾಯವಾಗಲಿದೆ. ನಂತರ ಬಹಿರಂಗ ಸಭೆ ನಡೆಯುವುದು. ತಮ್ಮ ಉಸ್ತುವಾರಿಯಲ್ಲಿರುವ ವಿಜಾಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೆತ್ರಗಳ ವ್ಯಾಪ್ತಿಯಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರ ಲೋಹದ ಪ್ರತಿಮೆಗಾಗಿ ಕಬ್ಬಿಣ ಸಂಗ್ರಹ ಕಾರ್ಯ ನಡೆಯಲಿದೆ. ಜನೆವರಿ 15 ರಿಂದ 26ರ ವರೆಗೆ ರಾಜ್ಯದಲ್ಲಿ ಲೋಹ ಸಂಗ್ರಹಣಾ ಸಮಿತಿ ಕಬ್ಬಿಣ ಸಂಗ್ರಹಿಸಲಿದೆ ಎಂದು ತಿಳಿಸಿದರು. ದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಬೀಸಿದೆ. ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು ಇದಕ್ಕೆ ಸಾಕ್ಷಿ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಇದಕ್ಕಾಗಿ ಸಂಘಟನೆಯನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಚಾಲಕರು, ಸಹ ಸಂಚಾಲಕರು ಹಾಗೂ ಮೂವರು ಸದಸ್ಯರನ್ನೊಳಗೊಂಡ ಶಕ್ತಿ ಕೇಂದ್ರಗಳನ್ನು ರಚಿಸಲಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 64 ಶಕ್ತಿ ಕೇಂದ್ರಗಳನ್ನು ರಚಿಸಲಾಗಿದೆ. ಶಕ್ತಿ ಕೇಂದ್ರಗಳ ಸದಸ್ಯರಿಗೆ ಇದೇ 23 ರಂದು ಕಾರ್ಯಾಗಾರ ನಡೆಸಲಾಗುವುದು ಎಂದ ಅವರು, ವಿಜಾಪುರದಲ್ಲಿ ಇದೇ  21, ಬಾಗಲಕೋಟೆಯಲ್ಲಿ 22 ಹಾಗೂ ಚಿಕ್ಕೋಡಿಯಲ್ಲಿ 24 ರಂದು ಕಾರ್ಯಾಗಾರ ನಡೆಯಲಿದೆ ಎಂದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಡಿ. 25 ರಂದು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಚಟುವಟಿಕೆ, ಭಾಷಣ, ನಿಬಂಧ ಸ್ಪರ್ಧೆ ಆಯೋಜಿಸಲಾಗುವುದು. ಜನೆವರಿ 15 ರಿಂದ 31ರ ವರೆಗೆ ಬಿಜೆಪಿ ಸಂದೇಶವನ್ನು ತಿಳಿಸಲು ಮನೆ ಮನೆಗೆ ಬಿಜೆಪಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಖಂಡನೆ: ಮಹಾರಾಷ್ಟ್ರ ಏಕೀಕರಣ ಸಮಿತಿ ಶಾಸಕ ಸಂಭಾಜಿ ಪಾಟೀಲ ಅವರು ರಾಜ್ಯದ ಬಗ್ಗೆ ಅವಹೇಳನಕಾರಿಯಾಗುವಂತೆ ಮಾತನಾಡಿದ್ದು ಖಂಡನೀಯ. ಕೂಡಲೇ ಅವರ ಶಾಸಕ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ದೀಪಕ ಜಮಖಂಡಿ, ಉಜ್ವಲಾ ಬಡವಾನಾಚೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.