ADVERTISEMENT

ರೈತರ ಖಾತೆಗೆ ಬೆಳೆ ವಿಮೆ ಹಣ ಹಾಕದ ರಾಜ್ಯ ಸರ್ಕಾರ; ಸುರೇಶ್‌ ಅಂಗಡಿ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 6:08 IST
Last Updated 31 ಮಾರ್ಚ್ 2018, 6:08 IST

ಬೆಳಗಾವಿ: ‘ಬೆಳೆ ವಿಮೆ ಮಾಡಿಸಿದ್ದ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರವು ₹ 108 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಸಿಗಬಾರದೆನ್ನುವ ಕಾರಣದಿಂದ ರಾಜ್ಯ ಸರ್ಕಾರವು ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಿಲ್ಲ’ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದರು.‘ಹಲವು ಬಾರಿ ನಾವು ಮನವಿ ಮಾಡಿದ್ದರೂ ರಾಜ್ಯ ಸರ್ಕಾರವು ಇದರತ್ತ ಗಮನ ಹರಿಸಲಿಲ್ಲ. ಹಣ ಜಮಾ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಲಿಲ್ಲ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ‘ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಣಿ ಚನ್ನಮ್ಮ ಹೆಸರು ಶಿಫಾರಸು ಮಾಡಿಲ್ಲ: ಇಲ್ಲಿಯ ಸಾಂಬ್ರಾ ವಿಮಾನ  ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದೆ. ಆದರೆ, ಇದುವರೆಗೆ ನಾಮಕರಣ ಮಾಡುವಂತೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸು ಮಾಡಲಿಲ್ಲ ಎಂದು ಆರೋಪಿಸಿದರು.

ಪೊಲೀಸ್‌ ಆಯುಕ್ತರ ವರ್ಗಾವಣೆ: ಲಿಂಗಾಯತ ಸಮುದಾಯಕ್ಕೆ ಸೇರಿದ ಬೆಳಗಾವಿ ನಗರ ಪೊಲೀಸ್‌ ಆಯುಕ್ತರಾಗಿದ್ದ ಡಿ.ಸಿ. ರಾಜಪ್ಪ ಅವರನ್ನು ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿಯೇ ವರ್ಗಾವಣೆ ಮಾಡಿದೆ ಎಂದು ಆರೋಪಿಸಿದರು.ಒಂದೆಡೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡುವ ರಾಜ್ಯ ಸರ್ಕಾರವು, ಇನ್ನೊಂದೆಡೆ ಇದೇ ಸಮುದಾಯಕ್ಕೆ ಸೇರಿದ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರವು ದ್ವಂದ್ವ ನೀತಿಯನ್ನೇಕೆ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.ವರ್ಗಾವಣೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ಕೈವಾಡವಿದೆ ಎಂದು ಆರೋಪಿಸಿದರು.

ADVERTISEMENT

ಖರೀದಿ ಕೇಂದ್ರ ಆರಂಭಿಸಿಲ್ಲ: ಮಾರುಕಟ್ಟೆಯಲ್ಲಿ ಜೋಳದ ದರ ಕುಸಿದು ಹೋಗಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಿ ಕ್ವಿಂಟಲ್‌ಗೆ ₹ 2,100 ದರದಲ್ಲಿ ಜೋಳ ಖರೀದಿಸಲು ಕೇಂದ್ರಗಳನ್ನು ತೆರೆಯಬೇಕೆಂದು ಹಲವು ಬಾರಿ ಒತ್ತಾಯಿಸಿದ್ದರೂ ರಾಜ್ಯ ಸರ್ಕಾರವು ಕೇಂದ್ರಗಳನ್ನು ತೆರೆಯಲಿಲ್ಲ ಎಂದು ಆರೋಪಿಸಿದರು.

‍‍ಪಕ್ಷದ ಮುಖಂಡರಾದ ಈರಣ್ಣಾ ಕಡಾಡಿ, ರಾಜೇಂದ್ರ ಹರಕುಣಿ, ಡಾ. ವಿಶ್ವನಾಥ ಪಾಟೀಲ, ಡಾ. ರವಿ ಪಾಟೀಲ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.