ADVERTISEMENT

‘ವಚನ ಆಚರಿಸಿ ವಜ್ರದಂತಾಗೋಣ’

ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ ನಡೆದ ವಿಜಯೋತ್ಸವದಲ್ಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 5:05 IST
Last Updated 5 ಅಕ್ಟೋಬರ್ 2017, 5:05 IST

ಬೆಳಗಾವಿ:  ‘ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿ ಆಚರಿಸಿದ ಶರಣದ ತತ್ವಗಳ ಬಸವ ಧರ್ಮವೇ ಲಿಂಗಾಯತ ಧರ್ಮವಾಗಿದೆ’ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಕಾರ್ಯದರ್ಶಿ ಆನಂದ ಗುಡಸ ಹೇಳಿದರು.

ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ದಸರಾ ಹಬ್ಬ, ಕಲ್ಯಾಣ ಕ್ರಾಂತಿ ಸಂಸ್ಮರಣೆಯಾಗಿ ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ ನಡೆದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕ್ರಾಂತಿ ಸಂಸ್ಮರಣೆಗಾಗಿ 9 ಶರಣ ಗಣಾಧೀಶರ ಚರಿತ್ರೆ ಅರಿತು 10 ನೇ ದಿನ ಲಿಂಗಾಯತ ಧರ್ಮ ವಿಜಯೋತ್ಸವ ಆಚರಿಸಿದ್ದರ ಸವಿ ನೆನಪಾಗಿ ಈಗ ಕಾರ್ಯಕ್ರಮ ನಡೆದಿದೆ. ಸಮಾಜ ಕಲ್ಯಾಣಕ್ಕಾಗಿ ಶರಣರ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಅವರು ಸಂದೇಶ ನೀಡಿದರು.

ADVERTISEMENT

‘ಸರ್ವರಿಗೆ ಸಮಬಾಳು, ಸಮಪಾಲು ಎನ್ನುವ ಜೀವನ ವಿಧಾನ ಅನುಸರಿಸಿ ಬಾಳಿ ಬದುಕಿದ ಅಂದಿನ ಶರಣದ ತ್ಯಾಗ ಬಲಿದಾನ ನಮ್ಮನ್ನು ಜಾಗೃತಗೊಳಿಸುವ ಸಂದೇಶವಾಗಿದೆ’ ಎಂದರು.

ಕಳೆದ 9 ದಿನಗಳಿಂದಲೂ ಪ್ರತಿ ದಿನ ಒಬ್ಬ ಶರಣ ಗಣಾಧೀಶರ ಚರಿತ್ರೆ ತಿಳಿಯುತ್ತಾ, ಕೊನೆಯ 10ನೇ ದಿನದ ಕಾರ್ಯಕ್ರಮವೇ ‘ಬಸವಧರ್ಮ ಅಥವಾ ಲಿಂಗಾಯತ ಧರ್ಮ ವಿಜಯೋತ್ಸವ’ವಾಗಿದೆ. ಶರಣರ ಮುತ್ಸದ್ಧಿತನಕ್ಕೆ ಅವರೇ ಬರೆದು ಆಚರಿಸಿದ ಅನುಭಾವಪೂರಿತ ವಚನಗಳೇ ಸಾಕ್ಷಿ ಎಂದು ಹೇಳಿದರು.

ಸರೋಜಿನಿ ಅಲ್ಲಯ್ಯನವರಮಠ ಸಾನಿಧ್ಯ ವಹಿಸಿದ್ದರು. ಡಾ. ಎಸ್.ಆರ್. ಅಂಗಡಿ ಬಸವ ಧ್ವಜಾರೋಹಣ ಮಾಡಿದರು. ರಾಷ್ಟ್ರೀಯ ಬಸವ ದಳದ ಕೋಶಾಧ್ಯಕ್ಷ ಮಲ್ಲಕಾರ್ಜುನ ಬಾಬಾನಗರ್ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಾರಿಹಾಳ್ ಬಸವ ಗುರು ಪೂಜೆ ಮಾಡಿದರು. ಅಶೋಕ ಬೆಂಡಿಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.