ADVERTISEMENT

ವಿಎಸ್ಎಂಐಟಿ: ಅಣಕು ಸಿಇಟಿ

ಮೊದಲ ಮೂರು ಸ್ಥಾನ ಪಡೆದವರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:54 IST
Last Updated 29 ಮಾರ್ಚ್ 2018, 6:54 IST

ನಿಪ್ಪಾಣಿ:‘ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿನ ವಿದ್ಯಾ ಸಂವರ್ಧಕ ಮಂಡಳದ ತಾಂತ್ರಿಕ ಕಾಲೇಜಿನಲ್ಲಿ ಏ.2 ಮತ್ತು 3ರಂದು ಅಣಕು ಸಿಇಟಿ ಪರೀಕ್ಷೆ ನಡೆಸಲಾಗುವುದು. ಈವರೆಗೆ 1500 ಮಂದಿ ನೋಂದಾಯಿಸಿಕೊಂಡಿದ್ದಾರೆ’ ಎಂದು ಮಂಡಳದ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ತಿಳಿಸಿದರು.

‘ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವ ಅನುಭವ ಪಡೆದುಕೊಳ್ಳಬಹುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪರೀಕ್ಷೆ ಮುಗಿದ ವಾರದೊಳಗೆ ಫಲಿತಾಂಶ ಪ್ರಕಟಿಸಲಾಗುವುದು. ಕಡಿಮೆ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಆರಂಭಿಸಲಾಗುವುದು. ನಗರ ಹಾಗೂ ಸುತ್ತಮುತ್ತಲಿನ ಭಾಗಗಳ ಹೆಚ್ಚಿನ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ನಡೆಸುವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಸಹಾಯ ಮಾಡಲಾಗುವುದು. ಸಿಇಟಿಯಲ್ಲಿ ಉತ್ತಮ ಸಾಧನೆ ತೋರುವುದರಿಂದ, ಎಂಜಿನಿಯರಿಂಗ್‌ ಮತ್ತು ಮೆಡಿಕಲ್ ಕೋರ್ಸ್‌ಗಳಿಗೆ ಸುಲಭವಾಗಿ ಪ್ರವೇಶ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ’ಎಂದು ಹೇಳಿದರು.‌

ADVERTISEMENT

‘ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಲ್ಯಾಪ್‌ಟಾಪ್‌, ಮೊಬೈಲ್, ಟ್ಯಾಬ್ಲೆಟ್‌ ನೀಡಲಾಗುವುದು. ಆಯಾ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗೆ ಆಕರ್ಷಕ ಬಹುಮಾನ ಕೊಡಲಾಗುವುದು’ ಎಂದು ವಿವರಿಸಿದರು.

‘ಕಾಲೇಜಿನಲ್ಲಿ ವಿವಿಧ ಕಂಪನಿಗಳು ಈಚೆಗೆ ನಡೆಸಿದ ಸಂದರ್ಶನದಲ್ಲಿ 26 ವಿದ್ಯಾರ್ಥಿಗಳು ಉದ್ಯೋಗ ಗಳಿಸಿದ್ದಾರೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ 100ರಷ್ಟು ಉದ್ಯೋಗ ಅವಕಾಶ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ’ ಎಂದರು.

ಪ್ರಾಚಾರ್ಯ ಪ್ರಕಾಶ್ ಹುಬ್ಬಳ್ಳಿ, ‘ಕಾಲೇಜಿನ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಸಾಧಿಸುವಂತಾಗಲು ವಿಶೇಷ ಕೌಶಲ ತರಬೇತಿ ನೀಡಲಾಗುತ್ತಿದೆ. ಯುರೋಪ್‌ನ ಹಲವು ವಿಶ್ವವಿದ್ಯಾಲಯಗಳೊಡನೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು. ಸಂಸ್ಥೆ ಸಂಚಾಲಕ ಶಿವಕುಮಾರ ಕಲ್ಯಾಣಶೆಟ್ಟಿ, ಸಂಜಯ ಮೊಳವಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.