ADVERTISEMENT

ವಿಧಾನಮಂಡಲ ಅಧಿವೇಶನಕ್ಕೆ ಎಂಇಎಸ್ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:53 IST
Last Updated 5 ಡಿಸೆಂಬರ್ 2012, 7:53 IST

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಗರದಲ್ಲಿ ಸಂಘಟಿಸಿರುವ ಮರಾಠಿ ಭಾಷಿಕರ ಮಹಾಮೇಳಾವಾಗೆ ಭರದ ಸಿದ್ಧತೆ ನಡೆದಿದೆ.

ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ ಬುಧವಾರ ಮಹಾಮೇಳಾವಾ ಉದ್ಘಾಟಿಸಲಿದ್ದು, ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್, ಕಾರ್ಮಿಕ ಸಚಿವ ಹಸನ್ ಮುಷರಫ್ ಸೇರಿದಂತೆ ಕಾಂಗ್ರೆಸ್ ಹಾಗೂ ಶಿವಸೇನೆ ಮುಖಂಡರು ಆಗಮಿಸಲಿದ್ದಾರೆ ಎಂದು ಎಂಇಎಸ್ ಹೇಳಿಕೊಂಡಿದೆಯಾದರೂ ನೆರೆ ರಾಜ್ಯದ ಗಣ್ಯ ರಾಜಕೀಯ ಮುಖಂಡರ ಆಗಮನದ ಬಗ್ಗೆ ಮಂಗಳವಾರ ಸಂಜೆಯವರೆಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇರಲಿಲ್ಲ.

ಮಹಾಮೇಳಾವ್‌ಗಾಗಿ ಇಲ್ಲಿನ ಟಿಳಕವಾಡಿ ಪ್ರದೇಶದಲ್ಲಿರುವ ಸುಭಾಷ್‌ಚಂದ್ರ ಬೋಸ್ ಮೈದಾನದಲ್ಲಿ (ಲೇಲೆ ಮೈದಾನ) ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಸಾಗಿತ್ತು. ಎಂಇಎಸ್ ಪ್ರಭಾವ ಇರುವ ಖಾನಾಪುರ, ಬೆಳಗಾವಿ ಗ್ರಾಮಾಂತರ, ನಗರ ಪ್ರದೇಶಗಳಿಂದ 25 ಸಾವಿರಕ್ಕೂ ಹೆಚ್ಚು ಜನರು ಮೇಳಾವಾನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದ ಎಂಇಎಸ್ ಮಾಧ್ಯಮ ಸಂಪರ್ಕ ಪ್ರಮುಖ ವಿಕಾಸ ಕಲಘಟಗಿ ತಿಳಿಸಿದರು.

`ಕರ್ನಾಟಕ ಸರ್ಕಾರ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಆಯೋಜಿಸುವ ಮೂಲಕ ಮರಾಠಿ ಭಾಷಿಕರ ಭಾವನೆಗಳ ಮೇಲೆ ಸವಾರಿ ಮಾಡುತ್ತಿದೆ. ಮರಾಠಿ ಸಂಸ್ಕೃತಿಯ ಮೇಲೆ ಬಲವಂತವಾಗಿ ಕನ್ನಡ   ಹೇರುತ್ತಿದೆ' ಎಂದು ಎಂಇಎಸ್ ನಗರ   ಪ್ರಮುಖ ಯಲ್ಲಪ್ಪ ಕಾಂಬಳೆ    ದೂರಿದರು. `ಜಿಲ್ಲಾಡಳಿತ ಅನುಮತಿ ನೀಡಲಿ, ಬಿಡಲಿ ಮೇಳಾವ ಸಂಘಟಿಸಿಯೇ ಸಿದ್ಧ' ಎಂದರು.

ಈ ಹಿಂದೆ 2006ರ ಸೆಪ್ಟೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಮೊದಲ ಅಧಿವೇಶನ ಸಂದರ್ಭದಲ್ಲಿಯೇ ಎಂಇಎಸ್ ಖಾನಾಪುರದಲ್ಲಿ ಮೇಳಾವ್ ಸಂಘಟಿಸಿತ್ತು. ಆಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತು. 2009ರ ಜನವರಿಯಲ್ಲಿ ನಡೆದ ಎರಡನೇ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಮೇಳಾವಾ ಸಂಘಟಿಸಲು ಎಂಇಎಸ್ ಪ್ರಯತ್ನಿಸಿತ್ತು.

ಆಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ಬಾರಿಯ ಮೇಳಾವಾ ಸಂಘಟನೆಯ ನೇತೃತ್ವವನ್ನು ಎಂಇಎಸ್ ಅಧ್ಯಕ್ಷ ವಸಂತರಾವ್ ಜಾಧವ್ ಹಾಗೂ ಮಾಜಿ ಶಾಸಕ ಮನೋಹರ ಕಿಣೇಕರ ವಹಿಸಿದ್ದಾರೆ. ಅವರೊಂದಿಗೆ ಮಾಜಿ ಮೇಯರ್ ಸಂಭಾಜಿ ಪಾಟೀಲ ಕೈಜೋಡಿಸಿದ್ದಾರೆ.

ಮೇಳಕ್ಕೆ ಅನುಮತಿ ಕೋರಿಕೆ: ಲೇಲೆ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಾಗಿ ಹೇಳಿ ಪೊಲೀಸ್ ಇಲಾಖೆಯಿಂದ ಎಂಇಎಸ್ ಅನುಮತಿ  ಕೋರಿದೆ. ಪೊಲೀಸರು ಪೆಂಡಾಲ್  ಹಾಕಲು ಮಾತ್ರ ಅನುಮತಿ ನೀಡಿದ್ದಾರೆ. `ಮೇಳಾವಾ ಆಯೋಜನೆಗೆ ಇನ್ನೂ ಅನುಮತಿ ದೊರೆತಿಲ್ಲ. ಪೊಲೀಸ್ ಇಲಾಖೆ ಒಪ್ಪಿಗೆಗಾಗಿ ಎಸ್‌ಪಿ ಕಚೇರಿಯಲ್ಲಿ ಕಾಯುತ್ತಿದ್ದೇವೆ' ಎಂದು   ಕಿಣೇಕರ ಮಂಗಳವಾರ ಸಂಜೆ   ಪ್ರತಿಕ್ರಿಯಿಸಿದರು.

`ಮೇಳಾವಾ ಆಯೋಜನೆ ಅನುಮತಿಗೆ ಅರ್ಜಿ ಸಲ್ಲಿಸುವಂತೆ ಎಂಇಎಸ್ ಮುಖಂಡರಿಗೆ ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಭಾಷಾ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಕಾರ್ಯಕ್ರಮ ಸಂಘಟಿಸುವ ಷರತ್ತಿನೊಂದಿಗೆ ಅನುಮತಿ ನೀಡಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.