ADVERTISEMENT

`ವೈದ್ಯ ವಿಜ್ಞಾನದಲ್ಲಿ ಕಳಕಳಿ ಇರಲಿ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 10:57 IST
Last Updated 16 ಏಪ್ರಿಲ್ 2013, 10:57 IST

ಬೆಳಗಾವಿ: `ವೈದ್ಯ ವಿಜ್ಞಾನವು ಸಾಮಾಜಿಕ ಕಳಕಳಿಯ ನೆಲೆಗಟ್ಟಿನ ಮೇಲೆ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಪುಣೆ ವಿಶ್ವವಿದ್ಯಾಲಯದ ಇಂಡರ್‌ಡಿಸಿಪ್ಲಿನರಿ ಆರೋಗ್ಯ ವಿಜ್ಞಾನ ವಿದ್ಯಾಲಯದ ನಿರ್ದೇಶಕ ಡಾ. ಭೂಷಣ ಪಟವರ್ಧನ ತಿಳಿಸಿದರು.

ಕೆಎಲ್‌ಇ ವಿಶ್ವವಿದ್ಯಾಲಯದ 7ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜೆಎನ್‌ಎಂಸಿಯ ಡಾ. ಜೀರಗೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ಸಮಗ್ರ ಔಷಧದಿಂದ ಭವಿಷ್ಯದ ಆರೋಗ್ಯ' ಕುರಿತು ಅವರು ಉಪನ್ಯಾಸ ನೀಡಿದರು.

`ಸಮಗ್ರ ವೈದ್ಯಕೀಯ ವ್ಯವಸ್ಥೆಯಲ್ಲಿ ಭವಿಷ್ಯದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿದೆ. ಪ್ರಪಂಚದಲ್ಲಿ ವೈದ್ಯ ವಿಜ್ಞಾನ, ಔಷಧ ವಿಜ್ಞಾನ, ರೋಗಿಗಳ ಸಮೀಕ್ಷಾ ವರದಿಗಳು ಕ್ಷಿಪ್ರವಾಗಿ ಬದಲಾಗುತ್ತಿದ್ದು, ಅದನ್ನು ಯುವ ವೈದ್ಯರು ಗಮನಿಸಬೇಕು' ಎಂದು ಹೇಳಿದರು.

ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೋಕಾಟೆ ಅತಿಥಿಗಳನ್ನು ಪರಿಚಯಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿ.ಡಿ. ಪಾಟೀಲ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಬಿ.ಆರ್. ನೀಲಗಾರ್ ವಂದಿಸಿದರು.

ಬ್ಯಾಡ್ಮಿಂಟನ್ ಪಟು ಅಭಿಷೇಕ ಯಲಿಗಾರ ಹಾಗೂ ಗಣಿತದಲ್ಲಿ ಪರಿಣಿತ 5 ವರ್ಷದ ಬಾಲಕ ಚಿನ್ಮಯಗೌಡ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಜಯ ಮೋರೆ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಕೆ.ಎಲ್.ಇ. ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಪತ್ರಿಕೆ ಹಾಗೂ ಸುದ್ದಿ ಪತ್ರಿಕೆ (ಕ್ಲೀನ್) ಬಿಡುಗಡೆ ಮಾಡಲಾಯಿತು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಡಾ. ಎಚ್.ಬಿ. ರಾಜಶೇಖರ್, ಡಾ. ಎಂ.ವಿ. ಜಾಲಿ, ಡಾ. ಎಫ್.ವಿ. ಮಾನ್ವಿ, ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳ ಬೋಧಕ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.