ADVERTISEMENT

ಶುಕ್ರವಾರ ದಿನವಿಡೀ ಸುರಿದ ಪುನರ್ವಸು ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 9:34 IST
Last Updated 20 ಜುಲೈ 2013, 9:34 IST

ಖಾನಾಪುರ: ಶುಕ್ರವಾರ ದಿನವಿಡೀ ಕೊಂಚವೂ ವಿರಾಮ ನೀಡದೇ ಪುನರ್ವಸು ಮಳೆ ಕೆಲವೊಮ್ಮೆ ದೊಡ್ಡ ಹನಿಗಳೊಂದಿಗೆ ಕೆಲವೊಮ್ಮೆ ತುಂತುರು ಹನಿಗಳೊಂದಿಗೆ ಸುರಿಯುವ ಮೂಲಕ ತಾಲ್ಲೂಕಿನಾದ್ಯಂತ ಗದ್ದೆಗಳಲ್ಲಿ ಹಾಗೂ ಕೆರೆಗಳಲ್ಲಿ ನೀರು ಹರಿಯುವಂತೆ ಮಾಡಿದೆ.

ತಾಲ್ಲೂಕಿನ ಪೂರ್ವಭಾಗದ ಗಾಡಿಕೊಪ್ಪ, ಪಾರಿಶ್ವಾಡ, ಚಿಕದಿನಕೊಪ್ಪ, ಮುಗಳಿಹಾಳ, ಅವರೊಳ್ಳಿ, ಬೀಡಿ, ಭೂರಣಕಿ, ಲಿಂಗನಮಠ, ಕಕ್ಕೇರಿ, ನಂದಗಡ, ಬೇಕವಾಡ, ಮಂಗೇನಕೊಪ್ಪ, ಕೊಡಚವಾಡ, ಚಾಪಗಾವ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಒಂದು ತಾಸಿಗೂ ಹೆಚ್ಚು ಎಡೆಬಿಡದೇ ಸುರಿದ ಮಳೆಯಿಂದ ಭೂಮಿಗೆ ತಂಪು ಸಿಕ್ಕಂತಾಗಿದೆ.

ತಾಲ್ಲೂಕಿನ ಇಟಗಿ, ಬೋಗೂರು, ತೋಲಗಿ, ಗಂದಿಗವಾಡ, ಹಂದೂರು-ಹುಲಿಕೊತ್ತಲ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ತುಂತುರು ಹನಿ ಉದುರಿವೆ. ಜೋರಾಗಿ ಮಳೆ ಬಂದರೆ ಜಮೀನುಗಳಲ್ಲಿರುವ ಬೆಳೆಗಳಿಗೆ ಹಾಗೂ ಊರ ಮುಂದಿನ ಕೆರೆಗಳಿಗೆ ಪ್ರಯೋಜನವಾಗುತ್ತದೆ.

ಆದರೆ ಈ ರೀತಿಯ ಜಿಟಿ ಜಿಟಿ ಮಳೆಯಾದರೆ ರೋಗ ರುಜಿನುಗಳಿಗೆ ಹಾದಿಮಾಡಿಕೊಟ್ಟಂತೆ ಮತ್ತು ಜಮೀನುಗಳಲ್ಲಿಯ ಬೆಳೆಗಳಿಗೆ ಕ್ರಿಮೀ ಕೀಟಗಳ ಉಪಟಳ ಶುರುವಾದಂತೆ ಎಂಬ ಅಭಿಪ್ರಾಯವನ್ನು ಇಟಗಿಯ ರೈತ ಸುದೀಪಗೌಡ ಪಾಟೀಲ ವ್ಯಕ್ತಪಡಿಸಿದ್ದಾರೆ.

ಇತ್ತ ಪಶ್ಚಿಮ ಘಟ್ಟದ ಕಣಕುಂಬಿ, ಹೆಮ್ಮಡಗಾ, ಭೀಮಗಡ, ಗವ್ವಾಳಿ, ಆಮಗಾಂವ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಶುಕ್ರವಾರದ ವರದಿಯಂತೆ ಅಸೋಗಾದಲ್ಲಿ 6.8 ಮಿ.ಮೀ, ಬೀಡಿಯಲ್ಲಿ 7 ಮಿ.ಮೀ, ಕಕ್ಕೇರಿಯಲ್ಲಿ 11.2 ಮಿ.ಮೀ, ಗುಂಜಿಯಲ್ಲಿ 26.4 ಮೀಮೀ, ಗವ್ವಾಳಿಯಲ್ಲಿ 46.8 ಮಿ.ಮೀ, ಜಾಮಗಾಂವನಲ್ಲಿ 55.8 ಮಿ.ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 32 ಮಿ.ಮೀ, ಲೋಂಡಾ ಪಿಡಬ್ಲ್ಯೂಡಿಯಲ್ಲಿ 54 ಮಿ.ಮೀ, ನಾಗರಗಾಳಿಯಲ್ಲಿ 24.3 ಮಿ.ಮೀ, ಜಾಂಬೋಟಿಯಲ್ಲಿ 12.4 ಮಿ.ಮೀ, ಚಾಪೋಲಿಯಲ್ಲಿ 82.8 ಮಿ.ಮೀ, ಕಣಕುಂಬಿಯಲ್ಲಿ 70.2 ಮಿ.ಮೀ , ಅಮಗಾಂವದಲ್ಲಿ  83.3 ಮಿ.ಮೀ ಹಾಗೂ ಖಾನಾಪುರ ಪಟ್ಟಣದಲ್ಲಿ 9.6 ಮಿ.ಮೀ ಮಳೆಯಾದ ವರದಿಯಾಗಿದೆ.

ತಾಲ್ಲೂಕಿನ ಚಿಕಲೆಯಿಂದ ಅಮಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಶುಕ್ರವಾರ ತಹಶೀಲ್ದಾರ್ ಗೀತಾ ಸಿ.ಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆ ಗಟ್ಟಿಮುಟ್ಟಾಗಿದ್ದು, ಗ್ರಾಮಸ್ಥರು ಈ ಸೇತುವೆಯ ಮೇಲೆ ಸಂಚರಿಸಲು ಯಾವುದೇ ತೊಂದರೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೇತುವೆಯಿಂದ ಕೆಳಮಟ್ಟದಲ್ಲಿ ನೀರು ಹರಿಯುವುದರಿಂದ ಸದ್ಯಕ್ಕೆ ಅಪಾಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರವೂ ಮಲಪ್ರಭಾ ನದಿಯ ಹಳೆಯ ಸೇತುವೆ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಣ್ಯ ಭಾಗದಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯ ಕಾರಣ ಶಿರೋಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೊಂಗಳಾ, ಗವ್ವಾಳಿ ಗ್ರಾಮಗಳ ನಡುವಿನ ಮಹಾದಾಯಿ ನದಿ ಹಾಗೂ ಬಂಢೂರಾ ಹಳ್ಳದಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಉಳಿದಂತೆ ಮಳೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.