ADVERTISEMENT

ಶ್ರೀಗಳಿಂದ ಗ್ರಾಮೀಣರ ಬದುಕು ಹಸನು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 8:40 IST
Last Updated 1 ಫೆಬ್ರುವರಿ 2011, 8:40 IST

ರಾಯಬಾಗ: “ಧರ್ಮ ಎಂದೂ ಬತ್ತುವದಿಲ್ಲ, ಅದಕ್ಕೆ ಸಮಾಜದ ಅನೇಕರ ಕೊಡುಗೆ ಹರಿದು ಬರುತ್ತಿದೆ. ಯಲ್ಲಾಲಿಂಗ ಮಹಾರಾಜರು ಸಮಾಜಕ್ಕೆ ದಾರಿ ದೀಪವಾಗಿ ಬಡಜನರನ್ನು ರಕ್ಷಿಸಿ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದು ಸಮಾಜಕ್ಕೆ ಶಾಂತಿ ತಂದುಕೊಟ್ಟು ಗ್ರಾಮೀಣ ಜನತೆಯ ಬದುಕನ್ನು ಹಸನಾಗಿಸಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಮುಗಳಖೋಡದ ಬೃಹನ್ಮಠದಲ್ಲಿ ಏರ್ಪಡಿಸಿದ್ದ ಯಲ್ಲಾಲಿಂಗ ಮಹಾರಾಜರ 25ನೇ ಪುಣ್ಯಾರಾಧನೆಯ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾವು ಯಾವುದೇ ಧರ್ಮದ ವಿರೋಧಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ತಾವು ಸರಕಾರದ ಬಗ್ಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುತ್ತಿದ್ದು ಇದು ಯಾವುದೇ ವೈಯಕ್ತಿಕ ದ್ವೇಷ ಹಾಗೂ ಅಸೂಯೆಯಿಂದ ಅಲ್ಲ. ಆಡಳಿತ ಪಕ್ಷ ಕೆಟ್ಟ ಹಾದಿ ಹಿಡಿದಾಗ ವಿರೋಧ ಪಕ್ಷಗಳು ತಮ್ಮ ಕರ್ತವ್ಯ ನಿರ್ವಹಿಸುವ ಕಾರ್ಯವನ್ನು ಮಾಡಿವೆ ಎಂದರು.ಮಳೆಯಿಂದ 2009ರಲ್ಲಿ ಬಿದ್ದ ಮನೆಗಳಿಗೆ ಸರಕಾರ ಕೊಟ್ಟ ಚೆಕ್ ಈವರೆಗೂ ನಗದಾಗಿಲ್ಲ ಎಂದು ಇಳಕಲ್‌ದ ಉದಾಹರಣೆ ನೀಡಿದರು.

ಸರಕಾರ ಒಳ್ಳೆ ಕೆಲಸ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ, ಬಡವರ ಪರವಾಗಿ ಕೆಲಸಮಾಡುವದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಬೃಹನ್ಮಠದ ಮಹಿಮೆ ವಿವರಿಸಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿವೆ ಎಂದರು. ಗುಲ್ಬರ್ಗಾದ ಸುಲಫಲ್ ಮಠದ ಮಹಾಂತ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಗಳಖೋಡ ಮಠ ತ್ರಿವೇಣಿ ಸಂಗಮ ಎಂದು ಬಣ್ಣಿಸಿದರು.

ತಾಲ್ಲೂಕಿನ ಮುಗಳಖೋಡದ ಬೃಹನ್ಮಠದ ಸಂಸ್ಥಾಪಕರಾದ ಯಲ್ಲಾಲಿಂಗ ಮಹಾರಾಜರ 25ನೇ ಪುಣ್ಯಾರಾಧನೆಯ ಬೆಳ್ಳಿಹಬ್ಬದ ಮಹೋತ್ಸವ ಏರ್ಪಡಿಸಲಾಗಿತ್ತು.ಲಿಂಗೈಕ್ಯ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಗೆ ಶಿವಯೋಗಿ ಷಡಕ್ಷರಿ ಮುರುಘರಾಜೇಂದ್ರ ಸ್ವಾಮಿಗಳು ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದರು.

ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಸ್ವಾಮಿಗಳಿಗೆ ಮಠದ ಭಕ್ತರು ಪಾದಪೂಜೆ ಹಾಗೂ ಸುವರ್ಣ ಕಿರೀಟಧಾರಣೆ ನೆರವೇರಿಸಿದರು. ಇದಕ್ಕೂ ಮುನ್ನ ಸಂಜಯ ಭಿರಡಿ ದಂಪತಿಯಿಂದ ಬೆಳ್ಳಿ ನಾಣ್ಯಗಳಿಂದ ಸ್ವಾಮಿಗಳ ತುಲಾಭಾರ ನೆರವೇರಿತು. ಷಡಕ್ಷರಿ ಮುರುಘರಾಜೇಂದ್ರ ಸ್ವಾಮಿಗಳು ಆಶೀರ್ವ ಚನ ನೀಡಿದರು.ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸ್ವಾಮಿಗಳ ದರ್ಶನಾಶೀರ್ವಾದ ಪಡೆದರು.  

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಆದರೆ ವೇದಿಕೆಗೆ ಬರಲಿಲ್ಲ.ಡಾ.ಸಿ.ಬಿ. ಕುಲಗೋಡ, ಅಪ್ಪಾಸಾಬ ಕುಲಗೋಡ, ಮಾರುತಿ ಗೋಕಾಕ, ಶಾಸಕರಾದ ಎಸ್.ಬಿ. ಘಾಟಗೆ, ದುರ್ಯೋಧನ ಐಹೊಳೆ, ಬಂಡೆಪ್ಪ ಕಾಶಂಪೂರ, ಅಮರೇಗೌಡ ಭಯ್ಯಾಪೂರ, ಹಾಗೂ ಶಶಿಕಾಂತ ನಾಯ್ಕ, ಜೆಡಿಎಸ್‌ನ ಎ.ಬಿ.ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಟಗಾರ, ಅಶೋಕ ಪೂಜಾರಿ, ಬಿ.ಸಿ. ಸರಿಕರ, ಮೋಹನ ಶಹಾ, ಮಾರುತಿ ಗೋಕಾಕ, ಚನ್ನಪ್ಪ ಯಡವನ್ನವರ, ಮಲ್ಲನಗೌಡ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಬಾಳಾಸಾಬ ವಡ್ಡರ,ಅನಿಲ ದಳವಾಯಿ, ಪ್ರತಾಪರಾವ್ ಪಾಟೀಲ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.