ADVERTISEMENT

ಸಂಕೇಶ್ವರ ಘಟಕದ ಬಸ್ ನ್ಯಾಯಾಲಯ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 10:25 IST
Last Updated 24 ಫೆಬ್ರುವರಿ 2011, 10:25 IST

ಗೋಕಾಕ: ಅಪಘಾತ ಪ್ರಕರಣವೊಂದರಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯೊಬ್ಬನ ವಾರಸುದಾರರಿಗೆ ವಾಹನ ಅಪಘಾತ ನ್ಯಾಯಾಧೀಕರಣ ಹೊರಡಿಸಿದ ಆದೇಶದಂತೆ ರೂ. 7.12 ಲಕ್ಷ ಪೂರ್ತಿಯಾಗಿ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಅಂದಾಜು ರೂ. 4.5 ಲಕ್ಷ ವಸೂಲಾತಿಗಾಗಿ ನ್ಯಾಯಾಧೀಕರಣದ ಆದೇಶದ ಮೇರೆಗೆ ಸಂಕೇಶ್ವರ ಘಟಕದ ಬಸ್‌ವೊಂದನ್ನು ಜಪ್ತಿ ಮಾಡಿದ ಪ್ರಸಂಗ ನಡೆದಿದೆ.

2008ರ ಜನವರಿ 4ರಂದು ಮೂಲತಃ ಹುಕ್ಕೇರಿಯವನಾಗಿದ್ದ ಮೃತ ಭೀಮಪ್ಪ ಪರಸಪ್ಪ ಗಾಯಕವಾಡ (54) ಎಂಬಾತನ ವಾರಸುದಾರರು ತಾಲ್ಲೂಕಿನ ಹಳ್ಳೂರ ಗ್ರಾಮದ ನಿವಾಸಿ ಮಂಜುನಾಥ ಎಂಬಾತ ಪರಿಹಾರ ಕೋರಿ ಇಲ್ಲಿಯ ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಮೊರೆ ಹೋಗಿದ್ದರು. ನ್ಯಾಯಾಧೀಕರಣ ಪ್ರಕರಣದ ವಿಚಾರಣೆ ನಡೆಸಿ ಒಟ್ಟು 7.12 ಲಕ್ಷ ರೂ. ಮತ್ತು ಶೇ. 6ರ ಬಡ್ಡಿಯನ್ನು ಪಾವತಿಸುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಿತ್ತು.

ನಿರ್ದೇಶನದಂತೆ ಪೂರ್ತಿ ಪರಿಹಾರ ಧನ ಪಾವತಿಸಬೇಕಿದ್ದ ಸಾರಿಗೆ ಸಂಸ್ಥೆ, ಅರ್ಜಿದಾರರ ಒತ್ತಾಯದ ಹೊರತಾಗಿಯೂ ಕಳೆದ ಜೂನ್ ತಿಂಗಳಲ್ಲಿ ಕೇವಲ 4.10 ಲಕ್ಷ ರೂ.ಗಳನ್ನು ಮಾತ್ರ ಪಾವತಿಸಿತ್ತು ಎನ್ನಲಾಗಿದೆ. ಬಾಕಿ ಉಳಿದ ಸುಮಾರು 4.5 ಲಕ್ಷ ರೂ.ಗಳ ವಸೂಲಿಗಾಗಿ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಪ್ರತಿಯಾಗಿ ನಗರಕ್ಕೆ ಸಂಕೇಶ್ವರದಿಂದ ಆಗಮಿಸಿದ್ದ ಬಸ್ ಅನ್ನು ಜಪ್ತಿ ಮಾಡಿ ಮೂರು ದಿನಗಳ ಹಿಂದೆಯೇ ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ.

ನಿತ್ಯವೂ ಸಾವಿರಾರು ರೂ.ಗಳ ಆದಾಯ ತಂದುಕೊಡುತ್ತಿರುವ ಸುಸ್ಥಿತಿಯಲ್ಲಿನ ಬಸ್ ಹೀಗೆ ನ್ಯಾಯಾಲಯ ಆವರಣದಲ್ಲಿ ನಿಂತುಕೊಂಡರೆ ಸಂಸ್ಥೆಗೆ ಬರುವ ಆದಾಯ ಕಡಿಮೆ ಆಗುವ ಕುರಿತು ಅಧಿಕಾರಿಗಳು ಚಿಂತನೆ ನಡೆಸದೇ, ಬೇಜವಾಬ್ದಾರಿ ತೋರಿದ್ದಾರೆ ಎಂದು ಪರಿಹಾರ ಧನ ಪಾವತಿಗೆ ಕಾಯುತ್ತಿರುವ ಅರ್ಜಿದಾರರ ಪರ ವಕೀಲ ಯು.ಬಿ. ಶಿಂಪಿ ಅಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.