ADVERTISEMENT

ಸಂಗೀತದಿಂದ ಮಾನಸಿಕ ತೃಪ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:25 IST
Last Updated 19 ಜನವರಿ 2011, 10:25 IST

ಬೆಳಗಾವಿ: ಉತ್ತಮ ಸಂಗೀತದಿಂದ ಮಾನಸಿಕ ತೃಪ್ತಿ, ಮನೋವಿಕಾಸವೂ ಸಾಧ್ಯವಾಗುತ್ತದೆ. ಸಂಗೀತಕ್ಕೆ ಮನಸೋಲದ ಜನರಿಲ್ಲ. ಅಂತಹ ಸಂಗೀತ ಕಲಿಯುವ ಹಾಗೂ ಕೇಳುವುದರಲ್ಲಿ ಆಸಕ್ತಿ ಬೆಳೆಯಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದರು.ನಗರದ ಹೇರವಾಡಕರ ಶಾಲೆಯಲ್ಲಿ ಸಪ್ತಸ್ವರ ಸಂಗೀತ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಗೀತ ಸತತ ಅಭ್ಯಾಸದಿಂದ ಮಾತ್ರ ಸಿದ್ಧಿಯಾಗಲು ಸಾಧ್ಯ. ಸಂಗೀತ ಹಾಗೆ ಒಲಿಯುವುದಿಲ್ಲ.

ಸಂಗೀತ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಹಾಡುಗಳು, ಇತರೇ ಕಾವ್ಯ, ಕವನಗಳು ಜನರಿಗೆ ತಲುಪಬೇಕಾದರೆ ಅದಕ್ಕೆಲ್ಲ ಸಂಗೀತದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.ವಿಶೇಷ ಆಹ್ವಾನಿತರಾಗಿ ನೇತ್ರ ತಜ್ಞ ಡಾ. ಎಸ್.ಬಿ.ಕುಲಕರ್ಣಿ, ಕೆಪಿಟಿಸಿಎಲ್ ಎಂಜಿನಿಯರ್ ಸುಬೋಧ ಕುಲಕರ್ಣಿ, ಆರ್‌ಪಿಡಿ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ ಕುಲಕರ್ಣಿ, ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ, ನಿವೃತ್ತ ಪ್ರಾಚಾರ್ಯ ಡಾ. ಡಿ.ಎ.ಹೆಗಡೆ, ಬ್ಯಾಂಕ್ ಅಧಿಕಾರಿ ವಿಜಯೀಂದ್ರ ಪಾಟೀಲ, ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ ಭಟ್, ಪಂಡಿತ ವಿನಾಯಕ ಶಿರಸಾಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕೆ.ಎಚ್.ಚೆನ್ನೂರ ಭಾಗವಹಿಸಿದ್ದರು.

ಸಂಗೀತ: ನಂತರ ಸಪ್ತಸ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಅತಿಥಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಧಾರವಾಡದ ಅರ್ಜುನ ವಠಾರ ಹಾಗೂ ಪ್ರಾಚಾರ್ಯೆ ನಿರ್ಮಲಾ ಪ್ರಕಾಶ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು. ಜಿತೇಂದ್ರ ಸಾಬಣ್ಣನವರ, ದಯಾನಂದ ಕಾಮತ್, ಆದಿತ್ಯ ಕುಲಕರ್ಣಿ, ಭಾಗ್ಯಶ್ರೀ ಕರ್ವೆ, ದಿಗ್ಜಿಜಯ ಹೊನಗಲ್, ಅರ್ಜುನ ವಠಾರ ಸಂಗೀತ ಸಾಥ್ ನೀಡಿದರು.
ಡಾ. ಗುರುರಾಜ ಕಟ್ಟಿ, ಡಾ. ಉದಯ ವಾಲಿ, ಮಾಧುರಿ ಮಾಲಿಕ ದೇಸಾಯಿ, ಅನಿತಾ ಪಾಗದ, ಭಾರತಿ ಭಟ್, ನಾರಾಯಣ ಗಣಾಚಾರಿ, ಪ್ರಕಾಶ ರಾವ್, ಮುಕುಂದ ಗೋರೆ ಮತ್ತಿತರರು ಪಾಲ್ಗೊಂಡಿದ್ದರು.
ನಿರ್ಮಲಾ ಪ್ರಕಾಶ ಸ್ವಾಗತಿಸಿದರು. ವಿಜಯಾ ಜೋಶಿ ಕಾರ್ಯಕ್ರಮ ನಿರ್ವಹಿದರು. ರೇಣುಕಾ ವಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.