ADVERTISEMENT

ಸಂಭ್ರಮದಿಂದ ಜರುಗಿದ ಮಂಗಾಯಿದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 10:25 IST
Last Updated 18 ಜುಲೈ 2012, 10:25 IST
ಸಂಭ್ರಮದಿಂದ ಜರುಗಿದ ಮಂಗಾಯಿದೇವಿ ಜಾತ್ರೆ
ಸಂಭ್ರಮದಿಂದ ಜರುಗಿದ ಮಂಗಾಯಿದೇವಿ ಜಾತ್ರೆ   

ಬೆಳಗಾವಿ: ನಗರದ ವಡಗಾವಿಯಲ್ಲಿ ಮಂಗಳವಾರ ಸಂಭ್ರಮದಿಂದ ನಡೆದ ಪ್ರಸಿದ್ಧ ಮಂಗಾಯಿ ದೇವಿ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು ಮಂದಿರದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿಕೊಂಡರು.

ಆಷಾಢ ಮಾಸದ ಕೊನೆಯ ಮಂಗಳ ವಾರ ನಡೆಯುವ ಮಂಗಾಯಿ ದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬೆಳಿಗ್ಗೆ ಯಿಂದಲೇ ಸಾವಿರಾರು ಭಕ್ತರ ಮಹಾ ಪೂರವೇ ವಡಗಾವಿಗೆ ಹರಿದು ಬರುತ್ತಿತ್ತು. ಮಂಗಾಯಿ ದೇವಿಯಲ್ಲಿ ಬೇಡಿಕೊಂಡಿದ್ದು ಈಡೇರಿದ ಹಿನ್ನೆಲೆ ಯಲ್ಲಿ ಜಾತ್ರೆಗೆ ಬಂದ ಭಕ್ತರು ವಡಗಾವಿಯ ವಿಷ್ಣು ಗಲ್ಲಿ, ಪಾಟೀಲ ಗಲ್ಲಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿ ಮಂದಿರದ ಮೇಲೆ ಎಸೆದು ಹರಕೆ ತೀರಿಸಿಕೊಂಡರು.
ಬೆಳಗಾವಿ ಸುತ್ತ-ಮುತ್ತಲಿನ ಭಕ್ತರು ಮಂಗಾಯಿ ದೇವಿ ಜಾತ್ರೆಗೆ ತಪ್ಪದೇ ಬರುತ್ತಾರೆ.

 ತಮಗೆ ಎದುರಾದ ಸಮಸ್ಯೆ ಗಳನ್ನು ಪರಿಹರಿಸಿದರೆ ಜಾತ್ರೆಯಲ್ಲಿ ಕೋಳಿ ಅರ್ಪಿಸುವುದಾಗಿ ಹರಕೆ ಹೊತ್ತು ಕೊಳ್ಳುತ್ತಾರೆ. ಬೇಡಿಕೆ ಈಡೇರಿದರೆ ಜಾತ್ರೆಗೆ ಬಂದು ಮಂದಿರದ ಮೇಲೆ ಕೋಳಿಮರಿ ಎಸೆದು ಹರಕೆಯನ್ನು ಪೂರೈಸಿಕೊಳ್ಳುತ್ತಾರೆ. ಇನ್ನು ಕೆಲವು ಭಕ್ತರು ಕೋಳಿ, ಕುರಿ ಬಲಿ ಕೊಡುವು ದಾಗಿಯೂ ಹರಕೆ ಹೊತ್ತು ಕೊಳ್ಳು ತ್ತಾರೆ.

ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿ ದರೆ ಮಳೆ-ಬೆಳೆ ಉತ್ತಮವಾಗಿ ಆಗು ತ್ತದೆ ಎಂಬ ನಂಬಿಕೆಯಿಂದ ಸುತ್ತಮುತ್ತ ಲಿನ ರೈತರು ತಪ್ಪದೇ ಪ್ರತಿ ವರ್ಷ ಜಾತ್ರೆಗೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ.

“ಮಂಗಾಯಿ ದೇವಿಯಲ್ಲಿ ಬೇಡಿ ಕೊಂಡರೆ ಅಂದುಕೊಂಡಿದ್ದು ಈಡೇರು ತ್ತದೆ ಎಂಬ ನಂಬಿಕೆಯಿದೆ. ಸುಮಾರು 200 ವರ್ಷಗಳಿಂದಲೂ ನಮ್ಮ ಕುಟುಂಬದ ಹಿರಿಯರು ತಪ್ಪದೇ ಈ ಜಾತ್ರೆಯಲ್ಲಿ ಪಾಲ್ಗೊಂಡು ಕುರಿ ಬಲಿ ಯನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಪ್ರತಿ ವರ್ಷ ನೂರಾರು ಭಕ್ತರು ತಪ್ಪದೇ ಜಾತ್ರೆಗೆ ಆಗಮಿಸುತ್ತಾರೆ. ಕೋಳಿ ಮರಿಯನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ” ಎಂದು ವಡಗಾವಿಯ ಅರುಣ ಧಾಮ ನೇಕರ `ಪ್ರಜಾವಾಣಿ~ಗೆ ತಿಳಿಸಿದರು.

ಸಂಜೆಯವರೆಗೂ ಆಗಮಿಸುತ್ತಿದ್ದ ಸಾವಿರಾರು ಭಕ್ತರು ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ಕೊಂಡರು.

ಕೋಳಿ, ಕುರಿ ಬಲಿ: ಪ್ರಾಣಿ ಬಲಿಗೆ ಹೆಸರಾಗಿರುವ ಮಂಗಾಯಿ ದೇವಿ ಜಾತ್ರೆಯಲ್ಲಿ ಈ ಬಾರಿಯೂ ಸಾವಿರಕ್ಕೂ ಹೆಚ್ಚು ಕೋಳಿ, ಸುಮಾರು ಐವತ್ತಕ್ಕೂ ಹೆಚ್ಚು ಕುರಿಗಳನ್ನು ಬಲಿ ನೀಡಲಾ ಯಿತು.

ಸಾಕಷ್ಟು ಪೊಲೀಸರು   ಬಂದೋ ಬಸ್ತ್‌ಗೆ ಆಗಮಿಸಿದ್ದರೂ ಮಂದಿರದ ಸುತ್ತ-ಮುತ್ತ ಅವ್ಯಾಹತ ವಾಗಿ ಕೋಳಿ, ಕುರಿಗಳ ಬಲಿ ನಡೆಯಿತು.

ಪ್ರಾಣಿ ಬಲಿ ನಿಷೇಧಿಸಿರುವುದರಿಂದ ಮಂದಿರದ ಆವರಣದಲ್ಲಿ ಬಹಿರಂಗ ವಾಗಿ ಬಲಿ ನಡೆಯುವುದು ಕಡಿಮೆ ಯಾಗುತ್ತಿದೆ ಯಾದರೂ, ಸುತ್ತಮುತ್ತ ಲಿನ ಪ್ರದೇಶ ಗಳಲ್ಲಿ ಭಕ್ತರು ಕೋಳಿ- ಕುರಿಗಳನ್ನು ಬಲಿ ನೀಡಿ ಹರಕೆ ತೀರಿಸಿ ಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.