ADVERTISEMENT

ಸಕ್ರಮಗೊಳಿಸಿಕೊಳ್ಳದಿದ್ದರೆ ಸಂಪರ್ಕ ಕಡಿತ: ಸಚಿವ ಕತ್ತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:35 IST
Last Updated 5 ಜನವರಿ 2012, 8:35 IST

ಬೆಳಗಾವಿ: ಜಿಲ್ಲೆಯಲ್ಲಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ರೈತರು ಶುಲ್ಕ ತುಂಬಿ ಸಕ್ರಮಗೊಳಿಸಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ  ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಹಳೆ ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ವಿದ್ಯುತ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಅಕ್ರಮ ಪಂಪ್‌ಸೆಟ್‌ಗಳಿಂದಾಗಿ ವಿದ್ಯುತ್ ಪರಿವರ್ತಕಗಳು (ಟಿಸಿ) ಸುಟ್ಟು ಹೋಗುತ್ತಿವೆ. ಇದರಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿದೆ. ಅವರಿಗೆ ಸಕ್ರಮಗೊಳಿಸಿಕೊಳ್ಳಲು ಕಾಲಾವಧಿ ನೀಡಿ, ಮಾಡಿಕೊಳ್ಳದಿದ್ದರೆ ಸಂಪರ್ಕ ಕಡಿತಗೊಳಿಸಿರಿ. ಯಾವ ಜನಪ್ರತಿನಿಧಿಯೂ ಮಧ್ಯ ಪ್ರವೇಶಿಸುವುದಿಲ್ಲ~ ಎಂದು ಅವರು ಹೇಳಿದರು.

ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ 12 ಸಾವಿರದಷ್ಟು ಅಕ್ರಮ ಪಂಪ್‌ಸೆಟ್‌ಗಳಿವೆ. 8 ಸಾವಿರದಷ್ಟು ರೈತರು ನೋಂದಾಯಿಸಿಕೊಂಡಿದ್ದಾರೆ. ಜ.31ರ ವರೆಗೆ ಗಡವು ನೀಡಲಾಗಿದೆ ಎಂದರು.

ಶಾಸಕ ರಾಜು ಕಾಗೆ ಮಾತನಾಡಿ, ರೈತರಿಗೆ ಈ ಬಗೆಗೆ ಸರಿಯಾದ ಮಾಹಿತಿ ಇಲ್ಲ. ರೈತರು ಹಣ ತುಂಬುತ್ತಾರೆ. ಈ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಸಲಹೆ ಮಾಡಿದರು.

`ಸುಟ್ಟಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿಗಾಗಿ ಜಿಲ್ಲೆಯಲ್ಲಿ ಏಳು ಕೇಂದ್ರಗಳಿವೆ. ಅಲ್ಲಿ ನಿಗದಿತ ಪ್ರಮಾಣದಲ್ಲಿ   ಕೆಲಸ ಆಗುತ್ತಿಲ್ಲ. ಹೀಗಾಗಿ ಸ್ವಲ್ಪ ವಿಳಂಬವಾಗುತ್ತಿದೆ~ ಎಂದು ಪಾಂಡೆ ತಿಳಿಸಿದರು.

`ಲೋಡ್ ಹೆಚ್ಚಾಗಿರುವುದರಿಂದ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ದುರಸ್ತಿ ವಿಳಂಬವಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಒಂದು ವಾರದಲ್ಲಿ ದುರಸ್ತಿ ಮಾಡಿಕೊಡುವ ಕೆಲಸ ಆಗಬೇಕು~ ಎಂದು ಸಚಿವರು ಸೂಚಿಸಿದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ ಮಾತನಾಡಿ, ಅವಶ್ಯಕತೆಗೆ ತಕ್ಕಂತೆ ದುರಸ್ತಿ ಕೇಂದ್ರಗಳನ್ನು ಹೆಚ್ಚಿಸಿ. ನಿಗದಿತ ಸಮಯದಲ್ಲಿ ದುರಸ್ತಿ ಮಾಡಿಕೊಡಲು ಕ್ರಮಕೈಗೊಳ್ಳಬೇಕು ಎಂದರು.

`ಒಂದು ವಾರದಲ್ಲಿ ದುರಸ್ತಿ ಮಾಡಿಕೊಡದಿದ್ದರೆ ಪ್ರತಿ ದಿನ 500 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಚಿಕ್ಕೋಡಿಯಲ್ಲಿ ಇನ್ನೊಂದು ದುರಸ್ತಿ ಕೇಂದ್ರ ಆರಂಭಿಸಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಕೆಲವು ಟಿಸಿಗಳನ್ನು ನೀಡಲಾಗುವುದು~ ಎಂದು ಪಾಂಡೆ ತಿಳಿಸಿದರು.

ಇದಕ್ಕೆ ಪೂರಕವಾಗಿ ಮಾಹಿತಿ ನೀಡಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಪ್ರಕಾಶ ಹರಗಾಪುರ, ಪ್ರಗತಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೆಲಸ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿಯೂ ಕೆಲಸ ತೀವ್ರಗೊಳಿಸಬೇಕು ಎಂದು ಮನವಿ ಮಾಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ ಶೀಘ್ರದಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಪಾಂಡೆ ಹೇಳಿದರು. ಜಿಲ್ಲೆಯಲ್ಲಿನ 1,169 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಮಾರ್ಚ್ 31 ರೊಳಗೆ ಕಲ್ಪಿಸಬೇಕು ಎಂದು ಸೂಚಿಸಿದ ಸಚಿವರು, ಈ ಯೋಜನೆಯನ್ನು ಸಂಪೂರ್ಣವಾಗಿ ಒಂದೇ ಇಲಾಖೆ ವಹಿಸುವ ಬಗೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

`ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಹೆಸ್ಕಾಂ ವಹಿಸದೇ ಜಿಲ್ಲಾ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗದಲ್ಲಿ ಮಾಡುವಂತೆ~ ಅವರು ಸೂಚಿಸಿದರು.

ಸಂಸದ ಸುರೇಶ ಅಂಗಡಿ, ಶಾಸಕರಾದ ಕಾಕಾಸಾಹೇಬ ಪಾಟೀಲ, ಡಿ.ಎಂ. ಐಹೊಳೆ, ಸಂಜಯ ಪಾಟೀಲ, ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.