ADVERTISEMENT

ಸತ್ವಯುತವಾಗಿ ಬರೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 8:25 IST
Last Updated 20 ಜೂನ್ 2011, 8:25 IST

ಬೆಳಗಾವಿ: `ಎಷ್ಟು ಬರೆದಿದ್ದೇವೆ ಎನ್ನುವುದು ಮುಖ್ಯವಲ್ಲ, ಏನು ಬರೆದಿದ್ದೇವೆ ಎನ್ನುವುದು ಮುಖ್ಯ. ಕಡಿಮೆ ಬರೆದರೂ ಸತ್ವಯುತವಾದದ್ದನ್ನು ಬರೆಯಬೇಕು. ಆಗಲೇ ಬರವಣಿಗೆ ಸಾರ್ಥಕತೆ ಕಾಣುತ್ತದೆ~ ಎಂದು ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಬೆಳಗಾವಿ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ `ಆಧುನಿಕೋತ್ತರ ಕನ್ನಡ ಮರಾಠಿ ಮಹಿಳಾ ಸಾಹಿತ್ಯ~ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ವ್ಯವಸ್ಥೆಯ ಮೂಲವನ್ನು ಅಲುಗಾಡಿಸಿದಾಗ ಮಾತ್ರ ಸತ್ಯ ಹೊರಬರುತ್ತದೆ. ಸತ್ಯದಿಂದ ಕೂಡಿದ ಬರವಣಿಗೆ ಶಾಶ್ವತವಾಗಿರುತ್ತದೆ. ಅಧ್ಯಯನಶೀಲ ಬರವಣಿಗೆ ಇಂದಿನ ಅವಶ್ಯವಾಗಿದೆ~ ಎಂದು ಅವರು ತಿಳಿಸಿದರು.
`ಬೆಳಗಾವಿ ಲೇಖಕಿಯರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ವಿಮರ್ಶೆಯೂ ಆಗುತ್ತಿಲ್ಲ. ಅವರ ಕೃತಿಗಳ ಪ್ರಾಮಾಣಿಕ ವಿಮರ್ಶೆಯಾಗಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಹಾಗೂ ಮರಾಠಿಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸಾಹಿತಿಗಳು ಹಾಗೂ ಅವರು ರಚಿಸಿದ ಕೃತಿಗಳ ಬಗೆಗೆ ಅವರು ಸವಿಸ್ತಾರವಾಗಿ ವಿವರಿಸಿದರು.

`ಮರಾಠಿಯಲ್ಲಿ ಲೇಖಕಿಯರು ಆತ್ಮಕಥೆಗಳನ್ನು ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಅಂತಹ ಕೃತಿಗಳ ಕೊರತೆ ಇದೆ. ಕನ್ನಡದಲ್ಲಿ ದಲಿತ ಮಹಿಳೆಯರ ಸಂವೇದನೆ ಬಿಂಬಿಸುವ ಕಥೆ-ಕಾದಂಬರಿಗಳು ಬಂದಿಲ್ಲ. ಇವುಗಳ ಬಗೆಗೆ ಲೇಖಕಿಯರು ಗಮನ ಹರಿಸಬೇಕಿದೆ~ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಚಿವೆ ಲೀಲಾದೇವಿ ಪ್ರಸಾದ, `ಪುರುಷ ಪ್ರಧಾನ ಸಮಾಜದಲ್ಲಿ ಲೇಖಕಿಯರಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.

`ಲೇಖಕಿಯರಿಗೆ ಇಲ್ಲಿಯವರೆಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿಲ್ಲ. ಯೋಗ್ಯ ಲೇಖಕಿಯರು ಇಲ್ಲವೇ ? ಲಾಬಿಗೆ ಮಾತ್ರ ಪ್ರಶಸ್ತಿ ಸಿಗುತ್ತದೆಯೇ~ ಎಂದು ಅವರು ಪ್ರಶ್ನಿಸಿದರು.

`ಇಲ್ಲಿಯವರೆಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಸಿಕ್ಕಿಲ್ಲ. ಈ ಕೊರಗು ಲೇಖಕಿಯರನ್ನು ಕಾಡುತ್ತಿದೆ. ಈ ಬಗೆಗೆ ಯಾರೂ ಏಕೆ ಚಿಂತನೆ ಮಾಡುತ್ತಿಲ್ಲ. ಕೇಳದ ಹೊರತು ಯಾರೂ ಕೊಡುವುದಿಲ್ಲ.  ಲೇಖಕಿಯರು ಸಂಘಟಿತರಾಗಬೇಕು~ ಎಂದು ಅವರು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಡಾ. ಹನುಮಾಕ್ಷಿ ಗೋಗಿ, `ಲೇಖಕಿಯರು ಸಂಘಟಿತರಾಗಿ ಕೆಲಸ ಮಾಡಬೇಕು. ವಿಚಾರ ಹಾಗೂ ಸಾಹಿತ್ಯದಲ್ಲಿ ಮರಾಠಿ ಲೇಖಕಿಯರು ನಮಗಿಂತ ಮುಂದೆ ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು~ ಎಂದರು. ಸಂಘದ ಅಧ್ಯಕ್ಷೆ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಸರಿತಾ ಕುಲಕರ್ಣಿ, ಸುಮಾ ಕಿತ್ತೂರು, ರಂಜನಾ ನಾಯಕ, ದೀಪಿಕಾ ಚಾಟೆ ಮತ್ತಿತರರು ಹಾಜರಿದ್ದರು. ನಯನಾ ಗಿರಿಗೌಡರ ಪ್ರಾರ್ಥಿಸಿದರು. ಪದ್ಮಾ ಕುಲಕರ್ಣಿ ಪರಿಚಯಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.