ADVERTISEMENT

ಸರ್ಕಾರದ ಭೂಮಿ ಕಬಳಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 7:45 IST
Last Updated 10 ಏಪ್ರಿಲ್ 2012, 7:45 IST

ಅಥಣಿ: ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿ ಕೊಂಡಿರುವ ತಾಲ್ಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಸೇರಿದ ಜಮೀನನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿ ಐದು ವರ್ಷ ಗತಿಸಿದರೂ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. 

 ಗ್ರಾಮದ ಹೊರವಲಯದಲ್ಲಿರುವ ರಿ.ಸ.ನಂ 410ರ ಗೋಮಾಳದ ಜಮೀನಿನ ಪೈಕಿ 10 ಎಕರೆ ಜಾಗವನ್ನು ಸರ್ಕಾರ, ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾಲಯ ಸ್ಥಾಪಿಸಲು ಹಲವು ವರ್ಷಗಳ ಹಿಂದೆ ಮಂಜೂರು ಮಾಡಿತ್ತು.

ನಂತರ ಶಿಕ್ಷಣ ಇಲಾಖೆ ಆ ಸ್ಥಳದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೆ, ಹೆಚ್ಚುವರಿಯಾಗಿ ಉಳಿದ ಜಾಗವನ್ನು ಆಟದ ಮೈದಾನಕ್ಕಾಗಿ ಮೀಸ ಲಾಗಿಟ್ಟಿತ್ತು. ಆದರೆ ಕಾಲಕ್ರಮೇಣ ಗ್ರಾಮದ ಕೆಲ ಖಾಸಗಿ ವ್ಯಕ್ತಿಗಳು ಮೈದಾನದ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ಈ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ವಾಸದ ಮನೆ ಮತ್ತು ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ.

 ಇದರಿಂದ ಶಾಲೆಗೆ ಮೈದಾನವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ದಳವಾಯಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

2007ರಲ್ಲಿ ಪ.ಪೂ ಶಿಕ್ಷಣ ಇಲಾಖೆಯ ಆಯುಕ್ತರ ಗಮನಕ್ಕೆ ಬಂದ ನಂತರ ಅವರು ಸದರಿ ಅತಿಕ್ರಮಣ  ಜಾಗವನ್ನು ತೆರವುಗೊಳಿಸುವಂತೆ ಕೋರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅನೇಕ ಬಾರಿ ಲಿಖಿತ ದೂರನ್ನು ನೀಡಿದ್ದಾರೆ.

ಈ ಮಧ್ಯೆ, ಭೂ ಮಾಪನ ಇಲಾಖೆ ಅಧಿಕಾರಿಗಳು ಸ್ಥಾನಿಕ ಸಮೀಕ್ಷೆ ನಡೆಸಿ  ಪ್ರೌಢಶಾಲೆಗೆ ಎಂದು ಮಂಜೂರಾಗಿದ್ದ 4 ಎಕರೆ ಜಮೀನಿನ ಪೈಕಿ 1 ಎಕರೆ 10 ಗುಂಟೆ ಜಾಗ ಅತಿಕ್ರಮಣ ಮಾಡಿ ಕೊಳ್ಳ ಲಾಗಿದೆ ಎಂದು ವರದಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು  ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಭಾಷ ಸೋನಕರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

  ಇದೇ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆ  ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತ ಅನುಕೂಲಕ್ಕಾಗಿ ಕೊಳವೆ ಬಾವಿ ಕೊರೆಯಲು  ಮುಂದಾದಾಗ ರೈತ ಸಂಘ, ಕರ್ನಾಟಕ ಯುವ ಸೇನೆ, ಜೈಭೀಮ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವ ಜನಿಕರು ಪ್ರತಿಭಟನೆಗೆ ಇಳಿದಿದ್ದರು.

ಆದರೆ ಆಗ ಮಧ್ಯ ಪ್ರವೇಶಿಸಿದ್ದ ಐಗಳಿ ಪೊಲೀಸರು ಸಂಘಟನೆಗಳ ವಿರುದ್ಧವೇ ದೂರು ದಾಖಲಿಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದ ಎಂದು ತಾ.ಪಂ  ಸದಸ್ಯ ಸುಭಾಷ ಕಾಂಬಳೆ ಆರೋಪಿಸಿದ್ದಾರೆ. 

ಒತ್ತುವರಿಯಾಗಿರುವ  ಜಮೀನನ್ನು ತಕ್ಷಣ ತೆರವುಗೊಳಿಸಲು ಕಂದಾಯ ಇಲಾಖೆ ತಕ್ಷಣ ಮುಂದಾಗದಿದ್ದಲ್ಲಿ ರೈತ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕೊಕಟನೂರ ರೈತ ಸಂಘದ ಅಧ್ಯಕ್ಷ ಶಿವಗೌಡ ಸವದಿ, ಸುಟ್ಟಟ್ಟಿ ರೈತ  ಸಂಘದ ಅಧ್ಯಕ್ಷ ಮಂಜುನಾಥ ಅಂಬಾಜಿ ತಿಳಿಸಿದ್ದಾರೆ.

ಕರ್ನಾಟಕ ಯುವ ಸೇನಾ ಅಧ್ಯಕ್ಷ ರಾಹುಲ ದೊಡಮನಿ, ಜೈಭೀಮ ಸಂಘದ ಅಧ್ಯಕ್ಷ ಪರಶುರಾಮ ಕಾಮಗಾರ, ಪ್ರದೀಪ ಜಾಧವ, ಅಜೀತ ಮಾದರ ಸೇರಿದಂತೆ ಅನೇಕರು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.