ADVERTISEMENT

ಸರ್ಕಾರಿ ಯೋಜನೆ: ಸಕಾಲದಲ್ಲಿ ತಲುಪಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:15 IST
Last Updated 1 ಜೂನ್ 2011, 8:15 IST

ಬೆಳಗಾವಿ: ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಏಕರೂಪ ಕೌರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಪ್ರಧಾನಮಂತ್ರಿಗಳ 15 ಅಂಶಗಳ ಕಲ್ಯಾಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

`15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಸ್ಥಾಯಿ ಸಮಿತಿ ರಚಿಸಲಾಗಿದೆ~ ಎಂದು ಅವರು ಹೇಳಿದರು.

ಸಮಿತಿ ರಾಜ್ಯ ಸದಸ್ಯ ಗಫಾರಸಾಬ ಕಲೇಗಾರ ಮಾತನಾಡಿ, ಜಿಲ್ಲೆಯ ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸರ್ಕಾರದ ಕಲ್ಯಾಣ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಉತ್ತಮ್‌ಚಂದ ಜೈನ್, ಮುಬಶೀರ ಅಹ್ಮದ, ಎ.ಎ.. ಗಂಜನ್ನವರ ಮತ್ತಿತರರು ಉಪಸ್ಥಿತರಿದ್ದರು.

ಜೂನ್ 1ರಿಂದ ಬಸ್ ಪಾಸ್ ವಿತರಣೆ
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆಯಲು ಜೂನ್ 1 ರಿಂದ ಅರ್ಜಿ ನಮೂನೆ ನೀಡಲಾಗುವುದು.

ಅರ್ಜಿ ನಮೂನೆಗಳನ್ನು ಬೆಳಗಾವಿ ನಗರ, ತಾಲ್ಲೂಕು ಹಾಗೂ ಹೋಬಳಿ ಬಸ್ ನಿಲ್ದಾಣದ ಕೌಂಟರ್‌ಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ರಹವಾಸಿ ಪ್ರಮಾಣಪತ್ರ, ಶುಲ್ಕ ಪಾವತಿ ರಸೀದಿ, ಮೂರು ಭಾವಚಿತ್ರ ಸಲ್ಲಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ-ಹುಬ್ಬಳ್ಳಿ ನಡುವೆ ಹವಾ ನಿಯಂತ್ರಿತ ಬಸ್

ಬೆಳಗಾವಿ ಹಾಗೂ ಹುಬ್ಬಳ್ಳಿ ವಿಭಾಗಗಳಿಂದ ಜಂಟಿಯಾಗಿ ಬೆಳಗಾವಿ-ಹುಬ್ಬಳ್ಳಿ ನಡುವೆ ತಡೆ ರಹಿತ ಮೇಘದೂತ ಹವಾನಿಯಂತ್ರಿತ ಬಸ್ ಕಾರ್ಯಾಚರಣೆ ಆರಂಭಿಸಲಾಗಿದೆ.

ವಿಶೇಷ ಪ್ರೋತ್ಸಾಹ ದರದಲ್ಲಿ ಆರಂಭಿಸಲಾಗಿದ್ದು, ಪ್ರಯಾಣಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.